ತುಮಕೂರು: ಬೆಂಗಳೂರಿನ ಪಾದರಾಯನಪುರದ ಕಂಟೇನ್ಮೆಂಟ್ ಏರಿಯಾದಿಂದ ಕದ್ದು ತುಮಕೂರು ಜಿಲ್ಲೆಯ ಸಿರಾ ಪಟ್ಟಣಕ್ಕೆ ಬಂದಿದ್ದ 45 ವರ್ಷದ ವ್ಯಕ್ತಿಯಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿದೆ. ಪಿ.764 ಎಂದು ಗುರುತಿಸಲಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ 8ನೇ ಪ್ರಕರಣ ಪತ್ತೆಯಾದಂತಾಗಿದೆ.
ಸೋಂಕಿತನು ಬೆಂಗಳೂರಿನಲ್ಲಿ ಸೀಲ್ ಡೌನ್ ಆಗಿರುವ ಪಾದರಾಯಪುರ ಬಡಾವಣೆಯ ಬಿಬಿಎಂಪಿ ಕಂಟೇನ್ಮೆಂಟ್ ಜೋನ್ ವಾರ್ಡ್ ನಂ.135ರಿಂದ ಮೇ 4ರಂದು ರಾತ್ರಿ 7 ಗಂಟೆಗೆ ಸಿರಾಗೆ ತಪ್ಪಿಸಿಕೊಂಡು ಬಂದಿದ್ದ. ಪಾದರಾಯನಪುರದಲ್ಲಿನ ಹೋಟೆಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಸೋಂಕಿತನನ್ನು ಆತನ ಮಗ ಬೆಂಗಳೂರಿಗೆ ಹೋಗಿ ಸಿರಾ ಪಟ್ಟಣಕ್ಕೆ ಕರೆದುಕೊಂಡು ಬಂದಿದ್ದ.