ತುಮಕೂರು: ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಪೂರಕ ವ್ಯವಸ್ಥೆ ಮಾಡಿಕೊಡುತ್ತಿಲ್ಲ. ಅಲ್ಲದೆ ಯಾವುದೇ ವೈದ್ಯಕೀಯ ಚಿಕಿತ್ಸೆ ನೀಡದೆ ವೈದ್ಯರು ಮೌನ ವಹಿಸಿದ್ದಾರೆ. ಇದು ಮನಗೆ ಸಾಕಷ್ಟು ಗಾಬರಿ ಹುಟ್ಟಿಸಿದೆ ಎಂದು ಆರೋಪಿಸಿ ಸೋಂಕಿತರು ವಿಡಿಯೋ ಮಾಡಿದ್ದಾರೆ.
ಬಿಸಿ ನೀರು ಲಭ್ಯವಿಲ್ಲ, ಸ್ವಚ್ಛತೆ ಇಲ್ಲ. ಆಸ್ಪತ್ರೆಯಲ್ಲಿನ ಅವ್ಯವಸ್ಥೆ ನೋಡಿಯೇ ಪ್ರಾಣ ಬಿಡಬೇಕು. ಪಾವಗಡ ಮೂಲದ ಸೋಂಕಿತ ವ್ಯಕ್ತಿಯ ಪ್ರಕಾರ, ತಾನು ಜೂ. 30ರಂದು ದಾಖಲಾಗಿದ್ದೇನೆ. ಆದರೆ ಇದುವರೆಗೂ ಮಾತ್ರೆ ನೀಡಿಲ್ಲ. ಟೆಸ್ಟ್ ಮಾಡಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ತುಮಕೂರಿನಲ್ಲಿ ಕೊರೊನಾ ಸೋಂಕಿತರ ಅಳಲು ಆಸ್ಪತ್ರೆಯಲ್ಲಿ ಸ್ಯಾನಿಟೈಸ್ ಮಾಡುತ್ತಿಲ್ಲ. ಸೋಂಕಿತರಿಗೆ ಧೈರ್ಯ ತುಂಬುತ್ತಿಲ್ಲ. ಬಿಸಿ ನೀರು ಸಹ ಲಭ್ಯವಿಲ್ಲ. ನೀರಿಲ್ಲದೆ ಭಾನುವಾರದಿಂದ ಸ್ನಾನ ಮಾಡಿಲ್ಲ ಎಂದು ಸೋಂಕಿತರು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಈ ಸಂಬಂಧ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಆಸ್ಪತ್ರೆಯಲ್ಲಿ ಹೊಸ ಗೀಸರ್ ಅಳವಡಿಸಲಾಗಿದೆ. ಅದು ಕೆಲಸ ಮಾಡುತ್ತಿಲ್ಲ ಮತ್ತು ಅದನ್ನು ರಿಪೇರಿ ಮಾಡಲಾಗುತ್ತಿದೆ. ದಿನಕ್ಕೆ ಎರಡು ಬಾರಿ ಪ್ರತಿ ಕೊರೊನಾ ಸೋಂಕಿತರನ್ನು ಟೆಸ್ಟ್ ಮಾಡಲಾಗುತ್ತಿದೆ. ಗುಣಲಕ್ಷಣ ಕಂಡವರಿಗೆ ಮಾತ್ರ ಪರೀಕ್ಷಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.