ತುಮಕೂರು :ಲೋಕಸಭಾ ಚುನಾವಣೆ ಬರುತ್ತಿರುವುದರಿಂದ ಬಿಜೆಪಿಯವರು ಪೇಸಿಎಂ ಹಾಗೂ ಡಿಸಿಎಂ ಎಂಬುದನ್ನು ಮುಂದಿಟ್ಟುಕೊಂಡು ಅಪಪ್ರಚಾರ ಮಾಡ್ತಿದ್ದಾರೆ ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು. ತುಮಕೂರಿನಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಯಲ್ಲಿ ಉಂಟಾದ ಸಂತೋಷಕ್ಕೆ ಜನರಲ್ಲಿ ಗೊಂದಲ ಉಂಟುಮಾಡಲು, ಈ ರೀತಿಯಾಗಿ ಅಪಪ್ರಚಾರ ಮಾಡ್ತಿದ್ದಾರೆ. ಇದೆಲ್ಲವೂ ಸತ್ಯಕ್ಕೆ ದೂರವಾದದ್ದು ಎಂದರು.
ಗುತ್ತಿಗೆದಾರರಲ್ಲೂ ಕಮಿಷನ್ ಪಡೆಯಲು ಏಜೆಂಟ್ ಇದ್ದಾರೆಂಬ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಗುತ್ತಿಗೆದಾರರು ಅರ್ಜಿ ಕೊಡುತ್ತಿದ್ದಾರೆ ಅನ್ನೋದು ಸಹ ನಿರಾಧಾರ. ಆರೋಪಗಳ ಮೇಲೆ ನ್ಯಾಯಾಂಗದ ಮೊರೆ ಹೋಗಿ ಅಲ್ಲೂ ಕೂಡಾ ಆರೋಪಗಳನ್ನು ಮಾಡ್ತಿರುವವರ ಮೇಲೆ, ಕಾನೂನು ಕ್ರಮ ಕೈಗೊಳ್ಳುವ ಪ್ರಯತ್ನವನ್ನು ನಾವು ಮಾಡ್ತಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಸಂಸದ ಮುದ್ದಹನುಮೇಗೌಡ ಬರುವ ವಿಚಾರವಾಗಿ ಪ್ರತಿಕ್ರಿಯಿಸಿ, ಪಕ್ಷಕ್ಕೆ ಯಾರು ಬೇಕಾದರೂ ಬರಬಹುದು, ಹೋಗಬಹುದು ಎಂದರು.
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಫಂಡ್ ಕಲೆಕ್ಷನ್ - ಆರ್.ಅಶೋಕ್ :ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಲೋಕಸಭಾ ಚುನಾವಣೆಗೆ ಫಂಡ್ ಕಲೆಕ್ಷನ್‍ಗೆ ಇಳಿದಿರುವಂತಿದೆ. ನಮ್ಮ ಸರ್ಕಾರದ ವಿರುದ್ಧ ಪೇಸಿಎಂ ಆರೋಪ ಮಾಡಿದ್ದರು. ಆದರೆ, ಈಗ ಪೇ ಕಾಂಗ್ರೆಸ್, ಪೇಸಿಎಂ, ಪೇ ಡಿಸಿಎಂ ಆಗಿದೆಯೇ ಎಂದು ಆರ್.ಅಶೋಕ್ (ಆಗಸ್ಟ್ 10-2023) ಪ್ರಶ್ನಿಸಿದ್ದರು. ನಮ್ಮ ಸರ್ಕಾರದ ಅವಧಿಯ ಕಾಮಗಾರಿಗಳ ತನಿಖೆಗೆ ಮುಂದಾಗಿರುವ ನೀವೇನು ಸತ್ಯಹರಿಶ್ಚಂದ್ರರೇ?. 2013ರಿಂದ ತನಿಖೆ ನಡೆಸಿ ಎಂದು ಇದೇ ವೇಳೆ ಸವಾಲೆಸೆದಿದ್ದರು.