ತುಮಕೂರಿನಲ್ಲಿ ಬೆಂಬಲಿಗರಿಂದ ಬೃಹತ್ ಪ್ರತಿಭಟನೆ ತುಮಕೂರು:ಕೊರಟಗೆರೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ, ಜಿ. ಪರಮೇಶ್ವರ್ ಅವರನ್ನು ಸಿಎಂ ಮಾಡಬೇಕೆಂದು ಆಗ್ರಹಿಸಿ ತುಮಕೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ದಲಿತ ಸಮುದಾಯದ ವ್ಯಕ್ತಿ ಒಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಪೋಸ್ಟರ್ಗಳನ್ನು ಹಿಡಿದು ಕಾರ್ಯಕರ್ತರು ಒತ್ತಾಯಿಸಿದರು.
ತುಮಕೂರು ನಗರದ ಕಾಂಗ್ರೆಸ್ ಕಚೇರಿಯಿಂದ ಹೊರಟ ಪ್ರತಿಭಟನಾಕಾರರು ಭದ್ರಮ್ಮ ವೃತ್ತದ ಬಳಿಯವರೆಗೂ ಸಾಗಿದರು. ನಂತರ ಕೆಲಕಾಲ ಪ್ರತಿಭಟನೆ ನಡೆಸಿ ಹೈಕಮಾಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ಪರಮೇಶ್ವರ್ ಅವರನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದರು.
ನೂರಕ್ಕೆ ನೂರರಷ್ಟು ಸಿದ್ದರಾಮಯ್ಯ ಸಿಎಂ ಆಗಲಿದ್ದಾರೆ ಎಂದ ಶಾಸಕ ಕೆಎನ್ ರಾಜಣ್ಣ:ಸಿಎಂ ಆಯ್ಕೆಯಲ್ಲಿ ಯಾವುದೇ ಕಗ್ಗಂಟು ಇಲ್ಲ ಯಾವ ಗಂಟು ಇಲ್ಲ, ಎಲ್ಲ ಸರಾಗವಾಗಿದೆ. 18ಕ್ಕೆ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಬಹುದು. ನನಗೆ ವಿಶ್ವಾಸ ಇದೆ ನೂರಕ್ಕೆ ನೂರರಷ್ಟು ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಎಂದು ಮಧುಗಿರಿ ಶಾಸಕ ಕೆ ಎನ್ ರಾಜಣ್ಣ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು ಹೈಕಮಾಂಡ್ ಒಲವು ಕೂಡ ಅವರ ಪರವಾಗಿದೆ. ಹೈಕಮಾಂಡ್ ಎಲ್ಲರನ್ನೂ ಕರೆಯಿಸಿ ವಿಶ್ವಾಸಕ್ಕೆ ತೆಗೆದುಕೊಂಡು ಸಮಾನ ನೆಲೆಯಲ್ಲಿ ಎಲ್ಲರನ್ನು ತೆಗೆದುಕೊಂಡು ಹೋಗಬೇಕು ಎಂಬ ಪ್ರಯತ್ನ ಅಷ್ಟೇ ಎಂದು ಹೇಳಿದ್ದಾರೆ. ಇದಕ್ಕೆ ಡಿ ಕೆ ಶಿವಕುಮಾರ್ ಕೂಡ ಸಹಕಾರ ಕೊಡುತ್ತಾರೆ ಎಂಬ ವಿಶ್ವಾಸ ಇದೆ. ಸಿಎಂ ವಿಚಾರ ಇಂದು ಪೈನಲ್ ಆಗಲೇಬೇಕು ಎಂದರು.
ಸಚಿವ ಸಂಪುಟ ರಚನೆ ವಿಚಾರದ ಕುರಿತು ಮಾತನಾಡಿದ ಅವರು, ಸಚಿವ ಸಂಪುಟ ರಚನೆ ಸ್ವಲ್ಪ ತಡವಾಗಬಹುದು. ಸದ್ಯಕ್ಕೆ ಸಿದ್ದರಾಮಯ್ಯ ಒಬ್ಬರೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೊದಲ ದಿನವೇ ಕ್ಯಾಬಿನೆಟ್ ಮಾಡ್ತಾರೆ. 10 ಕೆಜಿ ಅಕ್ಕಿ ಘೋಷಣೆ ಮಾಡ್ತಾರೆ. ಅನ್ನಭಾಗ್ಯ ಯೋಜನೆ ಜಾರಿಗೆ ತರುವುದೇ ಮೊದಲ ತಿರ್ಮಾನ. ನಾನು ಸಚಿವ ಆಗಲೇಬೇಕು. ಸಹಕಾರ ಸಚಿವ ಸ್ಥಾನವೇ ಬೇಕು. ಅದು ಬಿಟ್ಟು ಬೇರೆ ಏನು ಕೇಳಲ್ಲ ಎಂದರು.
ಬಿಜೆಪಿ ಸೋಲು ವಿಚಾರ: ಶೇ40 ಪರ್ಸೆಂಟ್ ಕಮಿಷನ್ ಹಾಗೂ ಬೆಲೆ ಏರಿಕೆಯಿಂದಾಗಿ ಈ ಬಾರಿ ಬಿಜೆಪಿ ಸೋತಿದೆ. ಇಲ್ಲಿರುವ ಬಿಜೆಪಿ ರಾಜ್ಯ ನಾಯಕರಿಗೆ ಮತ ಸೆಳೆಯುವ ಶಕ್ತಿ ಇಲ್ಲ. ನಾಲ್ಕು ವರ್ಷಗಳಲ್ಲಿ ಒಂದು ಜನಪರ ಕಾರ್ಯವನ್ನೂ ಬಿಜೆಪಿ ನೀಡಲಿಲ್ಲ. ಮೀಸಲಾತಿ ಕೂಡ ಎಫೆಕ್ಟ್ ಆಗಿದೆ. ಜನರಿಗೆ ಸರ್ಕಾರದ ಬಗ್ಗೆ ಬೇಸರವಾಗಿತ್ತು. ರಾಜ್ಯದಲ್ಲಿ ಮೋದಿ ಅಲೆ ವರ್ಕೌಟ್ ಆಗಿಲ್ಲ. ಹಾಗಾಗಿ ಬಿಜೆಪಿ ಸೋತಿದೆ ಎಂದರು.
ಡಿಜಿಪಿ ಪ್ರವಿಣ್ ಸೂದ್ ಸಿಬಿಐಗೆ ನೇಮಕ ವಿಚಾರ: ಡಿ ಕೆ ಶಿವಕುಮಾರ್ ಅವರು ಪ್ರವಿಣ್ ಸೂದ್ ಅವರನ್ನು ಬೈದಿದ್ದರು. ಈಗ ಪ್ರವೀಣ್ ಸೂದ್ ಅವರನ್ನು ಸಿಬಿಐಗೆ ನೇಮಕ ಮಾಡಿದ್ದಾರೆ. ಡಿ ಕೆ ಶಿವಕುಮಾರ್ ಅವರನ್ನ ಟಾರ್ಗೆಟ್ ಮಾಡಲಿ ಎಂದೇ ಅವರನ್ನು ನೇಮಿಸಿದ್ದಾರೆ. ಶಿವಕುಮಾರ್ ಮೇಲೆ ದ್ವೇಷ ಸಾಧಿಸಿಲು ಹಾಗೇ ಮಾಡಿದ್ದಾರೆ. ಹೆದರಿಸುವುದು, ಬ್ಲ್ಯಾಕ್ಮೇಲ್ ರಾಜಕರಣ ಮಾಡುವುದು ಅವರ ಕೆಲಸ ಎಂದರು.
ಮಧುಗಿರಿ ಜಿಲ್ಲೆ ವಿಚಾರ:ಮಧುಗಿರಿಯನ್ನು ಜಿಲ್ಲೆ ಮಾಡಲು ಪ್ರಯತ್ನ ಮಾಡಲಾಗುವುದು. ನಾನು ಹೇಳಿದಂತೆ ನಡೆಯುವವನು, ಆದ್ದರಿಂದ ಮಧುಗಿರಿ ಜಿಲ್ಲೆ ಆಗಲಿದೆ. ನನಗೆ ಸಚಿವ ಸ್ಥಾನ ನೀಡಲೇಬೇಕು ಎಂದರು.
ಇದನ್ನೂ ಓದಿ:ಕಾದು ನೋಡಿ, ಹೈಕಮಾಂಡ್ ಸೂಚನೆ ಮೇರೆಗೆ ದೆಹಲಿಗೆ ಬಂದಿದ್ದೇನೆ: ಸಿದ್ದರಾಮಯ್ಯ