ತುಮಕೂರು/ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಇಂದು ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಗೊಂಡ ವಲಸಿಗರಿಗೂ ಟಿಕೆಟ್ ಘೋಷಣೆ ಮಾಡಿದೆ. ಅದರಲ್ಲಿ ಕೂಡ್ಲಿಗಿ ಶಾಸಕರಾಗಿದ್ದ ಎನ್ ವೈ ಗೋಪಾಲಕಷ್ಟ ಅವರಿಗೆ ಮೊಳಕಾಲ್ಮೂರು ಕ್ಷೇತ್ರಕ್ಕೆ ಟಿಕೆಟ್ ನೀಡಲಾಗಿದೆ. ಇನ್ನು ಬಿಜೆಪಿ ತೊರೆದು ಮಾತೃ ಪಕ್ಷಕ್ಕೆ ಬಂದ ಬಾಬೂರಾವ್ ಚಿಂಚನಸೂರು ಅವರಿಗೆ ಗುರುಮಠಕಲ್, ಎಸ್ ಆರ್ ಶ್ರೀನಿವಾಸ್ ಅವರಿಗೆ ಗುಬ್ಬಿ ಕ್ಷೇತ್ರ ಹಾಗೂ ದೇವೇಗೌಡರ ಆಪ್ತರಾಗಿದ್ದ ಬಿ ಎಲ್ ದೇವರಾಜ್ ಅವರಿಗೆ ಕೃಷ್ಣರಾಜಪೇಟೆಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
ಬಿಜೆಪಿ ಶಾಸಕರಾಗಿದ್ದ ಎನ್ ವೈ ಗೋಪಾಲಕೃಷ್ಣ ಅವರು ಕೂಡ್ಲಿಗಿ ಕ್ಷೇತ್ರವನ್ನು ಪ್ರತಿನಿದಿಸುತ್ತಿದ್ದರು. ಇತ್ತೀಚೆಗಷ್ಟೇ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಬಿಜೆಪಿಯ ವಿಧಾನ ಪರಿಷತ್ ಸದಸ್ಯರಾಗಿದ್ದ ಬಾಬುರಾವ್ ಚಿಂಚನಸೂರು ಕೆಲ ದಿನಗಳ ಹಿಂದೆ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದರು. ಜೆಡಿಎಸ್ನಿಂದ ಸ್ಪರ್ಧಿಸಿ ಗುಬ್ಬಿ ಕ್ಷೇತ್ರದ ಶಾಸಕರಾಗಿದ್ದ ಎಸ್ ಆರ್ ಶ್ರೀನಿವಾಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಕೈ ಹಿಡಿದಿದ್ದರು. ಹೆಚ್ ಡಿ ದೇವೇಗೌಡರ ಆಪ್ತರಾಗಿ ಗುರುತಿಸಿಕೊಂಡಿದ್ದ ದೇವರಾಜ್ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸನತ್ತ ಮುಖ ಮಾಡಿದ್ದರು. ಈಗ ಅವರೆಲ್ಲರಿಗೂ ಕಾಂಗ್ರೆಸ್ ಮಣೆ ಹಾಕಿದ್ದು, ಎರಡನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡಿದೆ. ಮತ್ತೊಂದೆಡೆ ಯಲ್ಲಾಪುರ ಕ್ಷೇತ್ರದಲ್ಲಿ ಸಚಿವ ಶಿವರಾಮ್ ಹೆಬ್ಬಾರ್ ವಿರುದ್ಧ ಅಖಾಡಕ್ಕಿಳಿಯಲು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿರುವ ವಿ ಎಸ್ ಪಾಟೀಲ್ ಅವರಿಗೆ ಮಣೆ ಹಾಕಲಾಗಿದೆ.
ವೈ ಎಸ್ ದತ್ತಾಗೆ 'ಕೈ' ತಪ್ಪಿದ ಟಿಕೆಟ್: ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದ ವೈ ಎಸ್ ವಿ ದತ್ತಾ ಅವರಿಗೆ ಕಡೂರು ಕ್ಷೇತ್ರದಿಂದ ಟಿಕೆಟ್ ಕೊಡಲಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಅವರಿಗೆ ಪಕ್ಷ ಶಾಕ್ ನೀಡಿದ್ದು, ಈ ಕ್ಷೇತ್ರಕ್ಕೆ ಆನಂದ್ ಕೆ ಎಸ್ ಅವರಿಗೆ ಟಿಕೆಟ್ ನೀಡಿ ಅವಕಾಶ ನೀಡಲಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ತುಮಕೂರು ಜಿಲ್ಲೆಯಲ್ಲಿ ಬಾಕಿ ಉಳಿದಿದ್ದ ಮೂರು ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗಿದೆ. ನಿರೀಕ್ಷೆಯಂತೆ ಎಸ್ ಆರ್ ಶ್ರೀನಿವಾಸ್ಗೆ ಗುಬ್ಬಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಘೋಷಣೆ ಮಾಡಲಾಗಿದೆ. ಈಗಾಗಲೇ ಕಳೆದ ಒಂದು ವರ್ಷದಿಂದ ಜೆಡಿಎಸ್ ತೊರೆಯುವುದಾಗಿ ಶ್ರೀನಿವಾಸ ಹೇಳುತ್ತಲೇ ಬಂದಿದ್ದರು. ಆದರೆ, ಯಾವ ಪಕ್ಷಕ್ಕೆ ಸೇರ್ಪಡೆಯಾಗುತ್ತದೆ ಎಂದು ಅಧಿಕೃತವಾಗಿ ಹೇಳಿರಲಿಲ್ಲ. ಇತ್ತೀಚೆಗೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಇನ್ನುಳಿದಂತೆ ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಇಕ್ಬಾಲ್ ಅಹಮದ್ಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಲಾಗಿದೆ. ತುಮಕೂರು ನಗರ ಕ್ಷೇತ್ರದಲ್ಲಿ ಐದಕ್ಕಿಂತ ಹೆಚ್ಚು ಆಕಾಂಕ್ಷಿಗಳಿದ್ದರು. ಮಾಜಿ ಶಾಸಕ ರಫೀಕ್ ಅಹಮದ್ ಹೆಸರನ್ನ ಕೈಬಿಟ್ಟು ಹೈ ಕಮಾಂಡ್ ಇಕ್ಬಾಲ್ ಅಹಮದ್ ಗೆ ಮಣೆ ಹಾಕಿದೆ.
ಮೊದಲ ಪಟ್ಟಿಯಲ್ಲಿ ಜಿಲ್ಲೆಯ 8 ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಮಾಡಲಾಗಿತ್ತು. ಉಳಿದ ಮೂರು ಕ್ಷೇತ್ರಗಳನ್ನು ಆಗ ಬಾಕಿ ಉಳಿಸಿಕೊಳ್ಳಲಾಗಿತ್ತು. ಇದೀಗ ಎರಡು ಕ್ಷೇತ್ರಗಳಿಗೆ ಮಾತ್ರ ಟಿಕೆಟ್ ಅಂತಿಮಗೊಳಿಸಿರೋ ಕಾಂಗ್ರೆಸ್, ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಮಾಡದೇ ಬಾಕಿ ಉಳಿಸಿಕೊಂಡಿದೆ.
ಇದನ್ನೂ ಓದಿ:ಕಾಂಗ್ರೆಸ್ನಿಂದ 42 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ.. ಯಾವ ಕ್ಷೇತ್ರಕ್ಕೆ ಯಾರು ನೋಡಿ