ತುಮಕೂರು:ಲಂಚ ಪಡೆದಿದ್ದ ಮಹಿಳಾಧಿಕಾರಿಯನ್ನು ಕಡ್ಡಾಯ ನಿವೃತ್ತಿಗೊಳಿಸಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಗುಬ್ಬಿ ತಾಲೂಕು ಉಪನೋಂದಣಿ ಕಚೇರಿಯಲ್ಲಿನ ಪ್ರಥಮ ದರ್ಜೆ ಸಹಾಯಕಿಯಾಗಿದ್ದ ಯಶೋಧ ವಿರುದ್ಧ ಮುದ್ರಾಂಕ ಇಲಾಖೆ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ. ಪ್ರಥಮ ದರ್ಜೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಇವರು ಕರ್ತವ್ಯ ಸಮಯದಲ್ಲಿ ಲಂಚ ಪಡೆದಿದ್ದರು. ಲಂಚ ಪಡೆದಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ವಿಡಿಯೋ ಆಧರಿಸಿ ತನಿಖೆ ನಡೆಸಲಾಗಿತ್ತು. ತನಿಖೆಯಲ್ಲಿ ಲಂಚ ಪಡೆದಿದ್ದು ಸಾಬೀತಾಗಿದೆ. ಹೀಗಾಗಿ ಸರ್ಕಾರ ಕಡ್ಡಾಯ ನಿವೃತ್ತಿಗೆ ಆದೇಶಿಸಿದೆ.
ಯಶೋದಮ್ಮ ಅವರ ಮೇಲೆ ಆಗಾಗ ಸಾರ್ವಜನಿಕರಿಂದ ಲಂಚ ಪಡೆಯುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತಿದ್ದವು. ಈ ಕುರಿತು ಇಲಾಖೆಯಿಂದ ತನಿಖೆ ನಡೆದಿತ್ತು. ಈ ನೆಲೆಯಲ್ಲಿ ಇವರನ್ನು ವರ್ಗಾವಣೆ ಮಾಡುವ ಪ್ರಕ್ರಿಯೆಗೂ ಕೂಡ ಇಲಾಖೆ ಮುಂದಾಗಿತ್ತು. ಆದಾಗಿಯೂ ಯಶೋದಮ್ಮ ಲಂಚ ಪಡೆಯುತ್ತಿರುವ ಕುರಿತು ಆರೋಪ ಕೇಳಿ ಬಂದವು. ಅಂತಿಮವಾಗಿ ಲಂಚ ಪಡೆದ ವಿಡಿಯೋ ವೈರಲ್ ಆಗುತ್ತಿದ್ದಂತೆ ಸರ್ಕಾರ ಗಂಭೀರವಾಗಿ ಪರಿಗಣಿಸಿ ಕಡ್ಡಾಯ ನಿವೃತ್ತಿ ಕ್ರಮ ತೆಗೆದುಕೊಂಡಿದೆ.
ಲಂಚಬಾಕ ಮಹಿಳಾ ಪಿಎಸ್ಐ ಬಲೆಗೆ:ಜಾಮೀನು ಸ್ವೀಕರಿಸಲು ಆರೋಪಿಯೊಬ್ಬನಿಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಶಿವಾಜಿನಗರ ಮಹಿಳಾ ಪೊಲೀಸ್ ಠಾಣೆಯ ಪಿಎಸ್ಐ ಸವಿತಾ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಕೆಲವು ದಿನಗಳ ಹಿಂದೆ ನಡೆದಿತ್ತು. ಪೊಲೀಸ್ ವಶದಲ್ಲಿದ್ದ ಆರೋಪಿಯೊಬ್ಬನ ಜಾಮೀನು ಸ್ವೀಕರಿಸಲು ಸವಿತಾ 50 ಸಾವಿರ ರೂಪಾಯಿಗೆ ಬೇಡಿಕೆಯಿಟ್ಟಿದ್ದು, ಆರೋಪಿಯ ಕಡೆಯವರು ಅಷ್ಟು ಹಣ ನೀಡಲು ಸಾಧ್ಯವಿಲ್ಲ ಎಂದಿದ್ದರು. ಅಂತಿಮವಾಗಿ ಹದಿನೈದು ಸಾವಿರಕ್ಕೆ ಬೇಡಿಕೆಯಿಟ್ಟಿದ್ದ ಸವಿತಾರ ವಿರುದ್ಧ ಆರೋಪಿ ಕಡೆಯವರಾದ ಅನಂತ್ ಕುಮಾರ್ ದೂರು ನೀಡಿದ್ದರು. ಈ ದೂರಿನನ್ವಯ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡ ಲೋಕಾಯಕ್ತ ಅಧಿಕಾರಿಗಳು ಹಣ ಸ್ವೀಕರಿಸುವಾಗಲೇ ಪಿಎಸ್ಐ ಸವಿತಾರನ್ನು ವಶಕ್ಕೆ ಪಡೆದಿದ್ದಾರೆ.