ತುಮಕೂರು:ಬರ ಪರಿಸ್ಥಿತಿ ವೇಳೆ ಸಮಗ್ರ ಕೃಷಿ ಪದ್ದತಿ ಮೂಲಕ ಸ್ವಸಹಾಯ ಗುಂಪಿನ ಮಹಿಳಾ ಸದಸ್ಯರಿಗೆ ಆರ್ಥಿಕ ನೆರವು ನೀಡುವ ಮಹತ್ವದ ಯೋಜನೆಯೊಂದಕ್ಕೆ ತುಮಕೂರು ಜಿಲ್ಲೆಯಿಂದ ಚಾಲನೆ ದೊರೆಯುತ್ತಿದೆ.
ಜಿಲ್ಲೆಯಲ್ಲಿ ಈ ಯೋಜನೆಗೆ ಬರುವ 10 ದಿನಗಳೊಳಗೆ ಚಾಲನೆ ದೊರೆಯಲಿದೆ. ಸ್ವಸಹಾಯ ಗುಂಪಿನಲ್ಲಿ ಸದಸ್ಯತ್ವ ಪಡೆದ ರೈತ ಮಹಿಳೆಯರು ಈ ಸೌಲಭ್ಯ ಪಡೆದುಕೊಳ್ಳಲಿದ್ದಾರೆ. ವರ್ಷದ 365 ದಿನಗಳ ಕಾಲ ಅಳವಡಿಸಿಕೊಳ್ಳಬಹುದಾದ ಈ ಸಮಗ್ರ ಕೃಷಿ ಪದ್ಧತಿಯಿಂದ ರೈತರ ಆದಾಯ ದ್ವಿಗುಣವಾಗಲಿದೆ. ಸಮಗ್ರ ಕೃಷಿ ಪದ್ಧತಿಯಡಿ ಕೃಷಿಯೊಂದಿಗೆ ಕೃಷಿಗೆ ಸಂಬಂಧಿಸಿದ ತೋಟಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ, ಕುರಿ/ಕೋಳಿ ಸಾಕಾಣಿಕೆ, ಮೀನು ಕೃಷಿ, ಜೇನು ಕೃಷಿ, ರೇಷ್ಮೆ, ಅರಣ್ಯೀಕರಣ, ಮತ್ತಿತರ ಚಟುವಟಿಕೆಗಳನ್ನು ಕೈಗೊಳ್ಳಬಹುದಾಗಿದೆ.
ರೈತ ಮಹಿಳೆಯರು 1 ಎಕರೆ ಜಮೀನು ಹೊಂದಿದ್ದರೂ ಸಹ ಯೋಜನೆಯ ಫಲಾನುಭವಿಯಾಗಬಹುದು. ಮಣ್ಣಿನ ಆರೋಗ್ಯ, ಮಳೆ ನೀರಿನ ಸಂಗ್ರಹಣೆ, ನೀರಿನ ಸದ್ಬಳಕೆ ಹಾಗೂ ಮರುಬಳಕೆ, ಕೃಷಿ ತ್ಯಾಜ್ಯದ ವಸ್ತುಗಳ ಸಂಗ್ರಹಣೆ/ಸದ್ಬಳಕೆ, ಪ್ರತಿ ಕೃಷಿ ಚಟುವಟಿಕೆ ಬಗ್ಗೆ ಲೆಕ್ಕ-ಪತ್ರ ನಿರ್ವಹಣೆ, ಚಟುವಟಿಕೆಯಿಂದಾದ ಲಾಭ-ನಷ್ಟದ ವರದಿ ತಯಾರಿಕೆ ಬಗ್ಗೆ ತರಬೇತಿ ನೀಡಲಾಗುವುದು.