ತುಮಕೂರು: ಜಿಲ್ಲೆಯ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್ ಹಾಗೂ ಬಿಜೆಪಿಯ ಮಾಜಿ ಶಾಸಕ ಸುರೇಶ್ ಗೌಡ ಬೆಂಬಲಿಗರ ನಡುವಿನ ದ್ವೇಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಬೆಳವಣಿಗೆ ಕ್ಷೇತ್ರದ ಜನರಲ್ಲಿ ಆತಂಕ ಉಂಟುಮಾಡಿದೆ. ಅಷ್ಟೇ ಅಲ್ಲದೇ, ಸುರೇಶ್ ಗೌಡ ಬೆಂಬಲಿಗರ ವಿರುದ್ಧ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆ ಅದ್ಧೂರಿಯಾಗಿ ಸಾಗಿದೆ. ಇನ್ನೊಂದೆಡೆ, ಬ್ಯಾನರ್ ಹಾಗೂ ಕಟೌಟ್ ಧ್ವಂಸ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೌರಿಶಂಕರ್ ಹಾಗೂ ಸುರೇಶ್ ಗೌಡ ಬೆಂಬಲಿಗರ ನಡುವೆ ಪರಸ್ಪರ ವಾಗ್ವಾದ ಆರಂಭವಾಗಿದೆ. ರಥಯಾತ್ರೆ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಗೌರಿಶಂಕರ್ ಆಪ್ತರು, ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಸುರೇಶ್ ಗೌಡ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಜಿಲ್ಲೆಯ ಹೊರಗಿನಿಂದ ರೌಡಿಗಳನ್ನು ಕರೆತಂದು ಹಲ್ಲೆ ಮಾಡಿದ್ದು, ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದರು.
ಇದಕ್ಕೆ ಪ್ರತಿಯಾಗಿ ಸುರೇಶ್ ಗೌಡ ಬೆಂಬಲಿಗರ ವಿರುದ್ಧ ಗೌರಿಶಂಕರ್ ಬೆಂಬಲಿಗರು ಜಾತಿ ನಿಂದನೆ, ಹಲ್ಲೆ ಪ್ರಕರಣ ದಾಖಲಿಸಿದ್ದಾರೆ. 'ಊರ್ಡಿಗೆರೆ ಹೋಬಳಿ ಬ್ಯಾತ ಗ್ರಾಮದಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆ ವೇಳೆ ಹಾಕಿದ್ದ ಕಟೌಟ್ ಕಿತ್ತು ಹಾಳು ಮಾಡಿದ್ದರು. ಇದನ್ನು ಪ್ರಶ್ನಿಸಿದ ಪರಿಶಿಷ್ಟ ಜಾತಿಯ ಯುವತಿಯ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ. ಅನೇಕರ ಮೇಲೆ ಕೂಡ ಹಲ್ಲೆ ನಡೆಸಿದ್ದಾರೆ' ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು 6 ಮಂದಿ ವಿರುದ್ಧ ಕ್ಯಾತ್ರಂದ್ರ ರಾಣೆಯಲ್ಲಿ ಪ್ರಕರಣ ದಾಖಲಾಗಿದೆ.