ತುಮಕೂರು :ಮಲೆನಾಡು ಭಾಗವಾದ ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಸಾಮಾನ್ಯವಾಗಿ ಆಯೋಜನೆ ಮಾಡುವಂತಹ ಕಾರ್ ಹಾಗೂ ಬೈಕ್ ರ‍್ಯಾಲಿಗಳನ್ನು ಇದೀಗ ಬಯಲು ಸೀಮೆಯ ತುಮಕೂರಿನಲ್ಲಿ ನಡೆಸಲಾಗುತ್ತಿದ್ದು, ಯುವಸಮೂಹ ಸಂಭ್ರಮಿಸಿತು. ಗುಬ್ಬಿ ತಾಲೂಕಿನ ಗಡಿ ಭಾಗದ ಶಿವಸಂದ್ರ, ಕಲ್ಲು ಹರದಗೆರೆ, ಕೊರೆ ಭಾಗದಲ್ಲಿ ಶನಿವಾರ ಮತ್ತು ಭಾನುವಾರ ಕರ್ನಾಟಕ ಮೋಟಾರ್ ಕ್ಲಬ್ ಆಯೋಜಿಸಿದ್ದ 'ಕೆ 1000' ಬೈಕ್ ರ‍್ಯಾಲಿ ಯಶಸ್ವಿಯಾಗಿ ಮುಕ್ತಾಯವಾಗಿದೆ.
ನಿಗದಿತ ರೂಟ್‌ಮ್ಯಾಪ್‌ನಂತೆ ಮೂರು ಹಂತಗಳಲ್ಲಿ ನಡೆದ ಈ ಸ್ಪರ್ಧೆಯು ಸುಮಾರು 90 ಕಿಲೋಮೀಟರ್ ಕಚ್ಚಾ ರಸ್ತೆಯಲ್ಲಿ ಮತ್ತು ಅರಣ್ಯ ಭಾಗದಲ್ಲಿ ನಡೆಯಿತು. ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ದೆಹಲಿ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಂದ ಸುಮಾರು 82 ಸ್ಪರ್ಧಿಗಳು ಭಾಗವಹಿಸಿ ಪ್ರಶಸ್ತಿ ಗೆಲುವಿಗೆ ಸೆಣಸಾಟ ನಡೆಸಿದರು. ಇದರಲ್ಲಿ 8 ಮಹಿಳಾ ರೈಡರ್ಸ್ ಕೂಡ ಭಾಗಿಯಾಗಿ ಪುರುಷ ಸ್ಪರ್ಧಿಗಳಂತೆ ಅತ್ಯಂತ ವೇಗವಾಗಿ ಬೈಕ್ ಓಡಿಸಿದರು.
ಗ್ರಾಮೀಣ ಭಾಗದ ಜನರಂತೂ ಬೈಕ್ಗಳು ಬರುವ ವೇಗಕ್ಕೆ ಶಿಳ್ಳೆ ಹಾಕುವ ಮೂಲಕ ಸ್ಪರ್ಧಿಗಳಿಗೆ ಉತ್ಸಾಹ ತುಂಬಿದರು. ರ‍್ಯಾಲಿ ವೇಳೆ ಅದೆಷ್ಟೋ ಬೈಕ್ಗಳು ಆಕಸ್ಮಿಕವಾಗಿ ಟ್ರ್ಯಾಕ್ ಬಿಟ್ಟು ತೋಟ, ಹೊಲಗಳಿಗೂ ನುಗ್ಗಿದಾಗ ಜನರೇ ಅವರನ್ನು ಎತ್ತಿ ಮತ್ತೆ ಟ್ರಾಕ್ಗೆ ಹೋಗಲು ಸಹಾಯ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. 'ಕೆ 1000' ಸ್ಪರ್ಧೆಯಲ್ಲಿ ಉಡುಪಿಯ ಸ್ಯಾಮಿಯಲ್ ಜೇಕಬ್, ನಟರಾಜು, ಅಬ್ದುಲ್ ವಾಹಿದ್ ಪ್ರಶಸ್ತಿ ಗೆದ್ದರು. 2014ರಲ್ಲಿ ಬೈಕ್ ರ‍್ಯಾಲಿ ಇಲ್ಲೇ ನಡೆದಿತ್ತು.