ತುಮಕೂರು : ಬಿಜೆಪಿ ವಿಜಯ ಸಂಕಲ್ಪ ಅಭಿಯಾನದ ಅಂಗವಾಗಿ ನಗರದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಮನೆ ಮನೆಗೆ ತೆರಳಿ ಬಿಜೆಪಿ ಕಮಲದ ಚಿಹ್ನೆಯನ್ನು ಗೋಡೆಗಳ ಮೇಲೆ ಬರೆದು, ಮತದಾರರಿಗೆ ಕರಪತ್ರಗಳನ್ನು ಹಂಚಿದರು. ತುಮಕೂರು ನಗರದ ವಾರ್ಡ್ ನಂಬರ್ 26ರ ಬೂತ್ ಸಂಖ್ಯೆ 157 ರಲ್ಲಿ ಬಿಜೆಪಿ ಸ್ಟಿಕರ್ಗಳನ್ನು ಗೋಡೆಗೆ ಅಂಟಿಸುವ ಮೂಲಕ ವಿಜಯ ಸಂಕಲ್ಪ ಅಭಿಯಾನಕ್ಕೆ ಅವರು ಚಾಲನೆ ನೀಡಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿದ್ದೇನೆ. ಈ ಕೆಲಸ ಎಲ್ಲಾ ಬೂತ್ ಮಟ್ಟದಲ್ಲಿ ಆಗಬೇಕು. ಎಲ್ಲಾ ಮಂತ್ರಿಗಳು ಅವರವರ ಕ್ಷೇತ್ರ ಹಾಗೂ ಅವರ ಉಸ್ತುವಾರಿ ಜಿಲ್ಲೆಗಳಲ್ಲಿ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಹೇಳಿದರು.
ಪ್ರತಿ ಹಳ್ಳಿ, ಪ್ರತಿ ಬೂತ್ಗೂ ತಲುಪುವ ಸಂಕಲ್ಪ: ಪ್ರತಿ ಹಳ್ಳಿ ಹಾಗೂ ತಾಲೂಕು, ಜಿಲ್ಲಾ ಮಟ್ಟದಲ್ಲಿ ಬೂತ್ ಸಮಿತಿ ನಿರ್ಮಾಣ, ಬೂತ್ ಪೇಜ್ ನಿರ್ಮಾಣ ಮಾಡುವಂತಹ ಕೆಲಸ ಆಗುತ್ತಿದೆ. ಎಲ್ಲಾ ಬೂತ್ ಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆಯಬೇಕು. ಈಗಾಗಲೇ ಮನೆಗೆ ಸ್ಟಿಕರ್ ಅಂಟಿಸುವ ಕೆಲಸ ಆಗುತ್ತಿದೆ. ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವ ಕೆಲಸ ಆಗಬೇಕು. ಪ್ರತಿಯೊಂದು ಬೂತ್, ಗ್ರಾಮ ಮಟ್ಟದಲ್ಲಿ ಈ ರೀತಿಯ ಕೆಲಸ ಆಗಬೇಕು. ಇದರಿಂದ ಪಕ್ಷಕ್ಕೆ ಬಲ ಬರುತ್ತದೆ. ಮುಂಬರುವ ಚುನಾವಣೆಯಲ್ಲಿ ಸುಸೂತ್ರವಾಗಿ ಚುನಾವಣೆಯನ್ನು ನಾವು ಗೆಲ್ಲಬಹುದು ಎಂದು ತಿಳಿಸಿದರು.ಪ್ರತಿಯೊಂದು ಕ್ಷೇತ್ರಕ್ಕೆ ನಾಲ್ಕು ರಥಗಳು ಹೋಗುತ್ತದೆ. ರಥಗಳ ಮೂಲಕ ಜನಜಾಗೃತಿ ಮಾಡಲಾಗುತ್ತದೆ. ಆ ಜಿಲ್ಲೆಯಲ್ಲಿ ನಮ್ಮ ಸರ್ಕಾರ ಯಾವೆಲ್ಲಾ ಕೆಲಸಗಳನ್ನು ಮಾಡಿದೆ ಎಂಬ ಬಗ್ಗೆ ಮನವರಿಕೆ ಮಾಡಲಾಗುತ್ತದೆ ಎಂದು ಹೇಳಿದರು.