ತುಮಕೂರು: ಕೊರೊನಾ ಸೋಂಕು ಸಂಭವಿಸಿದ ವೇಳೆ ಯಡಿಯೂರಪ್ಪ ಸರ್ಕಾರ ಉದ್ಯೋಗ ಮರುಸೃಷ್ಟಿಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದರು.
ಶಿರಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಒತ್ತಾಯದ ಮೇರೆಗೆ ಕೆಲ ಸಮುದಾಯದವರಿಗೆ ಸಹಾಯ ಮಾಡುವಂತೆ ಸರ್ಕಾರ ಮುಂದೆ ಬೇಡಿಕೆ ಇಟ್ಟಿದ್ದೆವು. ಹೀಗಾಗಿಯೇ ಅವರಿಗೆಲ್ಲ 5ರಿಂದ 6 ಸಾವಿರ ರೂ.ಯಷ್ಟು ಪರಿಹಾರ ಘೋಷಿಸಿದರು ಎಂದರು.
ನಿರುದ್ಯೋಗಿಗಳ ಬಗ್ಗೆ ಈ ಸರ್ಕಾರ ಯಾವುದೇ ಕಾಳಜಿ ವಹಿಸಿಲ್ಲ. ಅಜೀಮ್ ಪ್ರೇಮ್ ಜೀ ಫೌಂಡೇಷನ್ ವರದಿ ಪ್ರಕಾರ, ಶೇ 76ರಷ್ಟು ಉದ್ಯೋಗಿಗಳು ತಮ್ಮ ಕೆಲಸ ಕಳೆದುಕೊಂಡಿದ್ದಾರೆ ಎಂದು ಹೇಳುತ್ತೆ. ಆದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ನಿರುದ್ಯೋಗಿಗಳಿಗೆ ನೆರವಾಗದೆ ಇನ್ಯಾರಿಗೆ ನೀವು ಸಹಾಯ ಮಾಡುತ್ತೀರಾ? ಜನರ ಧ್ವನಿಯಾಗಲು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಳುಹಿಸಬೇಕು. ಮುಂದೆ ರಾಜ್ಯ ಹಾಗೂ ರಾಷ್ಟ್ರಕ್ಕೆ ಉತ್ತಮ ರಾಜಕೀಯ ಸಂದೇಶ ಕಳುಹಿಸಿ ಎಂದು ಹೇಳಿದರು.
ಶಿರಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ ಬಿಜೆಪಿಯ ಕೆಲವು ಸ್ನೇಹಿತರು ಪಕೋಡ ಮಾರಿ ಎಂಬ ಹೇಳಿಕೆ ನೀಡಿದ್ದರು. ಇಡೀ ವಿದ್ಯಾವಂತ ವರ್ಗಕ್ಕೆ ಇಂಥ ಪರಿಸ್ಥಿತಿ ಆಗಿದೆ ಎಂದರೇ ಸಾಮಾನ್ಯರ ಕಥೆ ಹೇಗಿರಬಹುದು. ಶಿರಾ ಕ್ಷೇತ್ರದ ಮತದಾರರು ಬಹಳ ಬುದ್ಧಿವಂತರು. ಜಯಚಂದ್ರ ಅವರು ಇದ್ದಾಗ ಹೇಗೆ ಅಭಿವೃದ್ಧಿಯ ಕೆಲಸ ಮಾಡಿದ್ದರು. ಆಮೇಲೆ ಏನಾಯ್ತು? ನಾವು ಕಾರ್ಯಕರ್ತರ, ಮತದಾರರ ಬಳಿ ಚರ್ಚೆ ಮಾಡಿದ್ದೇವೆ. ನಮ್ಮ ಬಳಿಯೂ ಒಂದು ವರದಿ ಇದೆ. ಆ ವರದಿ ನೋಡಿದರೆ ನಿಮಗೆ ಅಚ್ಚರಿ ಆಗುತ್ತದೆ ಎಂದರು.
ಶಾಸಕ ಜಮೀರ್ ಅವರ, 'ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ' ಹೇಳಿಕೆಗೆ ಪ್ರತಿಕ್ರಿಯಿಸಿ, ಅದಕ್ಕೆ ಅವರೇ ಪ್ರತಿಕ್ರಿಯೆ ಕೊಡುತ್ತಾರೆ ಎಂದರು. 'ಡಿಕೆಶಿ ಮೀರ್ ಸಾಧಿಕ್' ಎಂದ ಅಶ್ವಥ್ನಾರಾಯಣ್ ಹೇಳಿಕೆಗೆ, 'ಹೋ..! ಸರ್ವೀಸ್ ಪ್ರೊವೈಡರ್ ಹಾ..? ಅವರೇ ಎಜ್ಯುಕೇಷನ್ ಮಿನಿಸ್ಟ್ರು. ಅವರ ಶಬ್ಧಕೋಶದಲ್ಲಿ ಬೇರೆ ಪದಗಳಿದ್ದರ ಬಳಸಲಿ' ಎಂದು ಪ್ರತ್ಯುತ್ತರ ನೀಡಿದರು.
ಯುದ್ಧ ಸ್ವೀಕಾರ ಮಾಡುವುದಕ್ಕೆ ತಯಾರಿದ್ದೇವೆ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸುವುದಕ್ಕೆ ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ಮಾಡುತ್ತಿದ್ದಾರೆ. ನಾನು ನಮ್ಮ ಪಕ್ಷ ಕಟ್ಟುವ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಮೇಲೆ ನಡೆದ ಸಿಬಿಐ ದಾಳಿ ಒಳ್ಳೆಯದೋ ಕೆಟ್ಟದೋ ಅಂಥ ಜನ ತೀರ್ಮಾನ ಮಾಡುತ್ತಾರೆ ಎಂದು ಡಿಕೆಶಿ ಹೇಳಿದರು.