ತುಮಕೂರು:ಸಿಬಿಐ, ಇಡಿ ಹಾಗು ತೆರಿಗೆ ಇಲಾಖೆ ಸೇರಿದಂತೆ ಎಲ್ಲವನ್ನೂ ಕೇಂದ್ರ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ. ಈ ಇಲಾಖೆಗಳು ರಾಜಕೀಯ ವಸ್ತುವಾಗಬಾರದು ಎಂದು ತಿರುವನಂತಪುರಂ ಕ್ಷೇತ್ರದ ಸಂಸದ ಶಶಿ ತರೂರ್ ಹೇಳಿದ್ದಾರೆ.
ತುಮಕೂರಿನಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿಬಿಐ, ಇಡಿ, ತೆರಿಗೆ ಇಲಾಖೆಗಳ ದಾಳಿ ಮತ್ತು ತನಿಖೆ ಕೇವಲ ವಿಪಕ್ಷಗಳ ಮುಖಂಡರ ವಿರುದ್ದವೇ ಆಗುತ್ತಿದೆ. ನಮ್ಮೆಲ್ಲರ ವಿರುದ್ಧ ಕೇಸ್ ಮಾಡಿಬಿಡಿ. ಸಿಬಿಐ, ಇಡಿ, ತೆರಿಗೆ ಇಲಾಖೆಯಂಥ ಅತ್ಯುನ್ನತ ಸಂಸ್ಥೆಗಳ ಮೇಲೆ ದೇಶದ ಜನರು ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಆದರೆ ಕೇಂದ್ರ ಇಂಥ ಉನ್ನತ ಸಂಸ್ಥೆಗಳನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವುದು ಬೇಸರದ ಸಂಗತಿ. ಕೊನೆಯಲ್ಲಿ ಜನತೆಯೇ ಚುನಾವಣೆಯಲ್ಲಿ ನಿರ್ಧಾರ ಮಾಡುತ್ತಾರೆ ಎಂದರು.
ಡಿಕೆಶಿಗೆ ರಿಲೀಫ್ ವಿಚಾರ:ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ರಿಲೀಫ್ ಸಿಕ್ಕಿರುವುದು ತುಂಬಾ ಒಳ್ಳೆಯ ವಿಚಾರ. ನ್ಯಾಯಾಂಗ ಸ್ವತಂತ್ರವಾಗಿದೆ. ಪಂಚ ರಾಜ್ಯಗಳ ಚುನಾವಣೆಯ ಪೈಕಿ ಮಧ್ಯಪ್ರದೇಶ ಮತ್ತು ಛತ್ತೀಸ್‌ಘಡದಲ್ಲಿ ನಾವು ಮುಂದಿದ್ದೇವೆ. ತೆಲಂಗಾಣದಲ್ಲೂ ಕಾಂಗ್ರೆಸ್ ಪರ ಒಳ್ಳೆಯ ಫಲಿತಾಂಶ ಬರಲಿದೆ ಎಂದು ಹೇಳಿದರು.