ತುಮಕೂರು : ಮೂಡಬಿದರೆ ವಿಧನಾಸಭಾ ಕ್ಷೇತ್ರದ ಆಕಾಂಕ್ಷಿ, ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಪ್ತ ಮಿಥುನ್ ರೈ ಅವರು ನಿನ್ನೆ (ಬುಧವಾರ) ಉಡುಪಿ ಶ್ರೀ ಕೃಷ್ಣಮಠದ ಜಾಗವನ್ನ ಮುಸ್ಲಿಂ ದೊರೆ ನೀಡಿದ್ದು ಎಂದು ಹೇಳುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಜನರ ಬದುಕಿನ ಜೊತೆ ಚೆಲ್ಲಾಟವಾಡುತ್ತಿವೆ ಎಂದು ಪ್ರತಿಕ್ರಿಯಿಸಿದ್ದಾರೆ.
ತಿಪಟೂರು ತಾಲೂಕಿನ ಹೊನ್ನವಳ್ಳಿಯ ಪಂಚರತ್ನ ಯಾತ್ರೆಯಲ್ಲಿ ಪಾಲ್ಗೊಂಡು ನಂತರ ಈ ಕುರಿತಂತೆ ಮಾತನಾಡಿದ ಅವರು, ಧರ್ಮದ ಹೆಸರನ್ನ ಹೇಳಿಕೊಂಡು, ಜಾತಿಯ ಹೆಸರನ್ನ ಹೇಳಿಕೊಂಡು, ಇವರಿಗೆ ಜನರ ಕಷ್ಟದ ಬಗ್ಗೆ ಅರಿವಿದ್ಯೋ, ಇಲ್ವೋ ಗೊತ್ತಿಲ್ಲ. ಜನರಿಗೆ ಏನು ಬೇಕಿದೆ, ಅವರ ನಿರೀಕ್ಷೆ ಏನಿದೆ, ಅದನ್ನ ಬಿಟ್ಟು ಉಳಿದಿದ್ದನ್ನೆಲ್ಲ ಮಾತನಾಡ್ತಾರೆ ಎಂದು ಟೀಕಿಸಿದರು. ಇಲ್ಲಿ ಸಾರ್ವಜನಿಕವಾಗಿ ಸಂಘರ್ಷವನ್ನುಂಟು ಮಾಡಿ ಮತ ಪಡೆಯಲು ಹೊರಟಿದ್ದಾರೆ. ಈ ಬಾರಿ ಎರಡೂ ಪಕ್ಷಗಳ ನಡವಳಿಕೆಯನ್ನೇ ಗಮನಿಸಿ, ಎರಡೂ ಪಕ್ಷಗಳ ಸಹವಾಸ ಬೇಡ ಅಂತಾ ಜನ ಡಿಸೈಡ್ ಮಾಡಿದ್ದಾರೆ ಎಂದರು.
ಹೊಸ ಬದಲಾವಣೆ ಬೇಕೆಂಬುದು ಜನಾಭಿಪ್ರಾಯ-ಹೆಚ್ಡಿಕೆ: ತಿಪಟೂರಿನ ಹಲವಾರು ಗ್ರಾಮಗಳಿಗೆ ಭೇಟಿ ಕೊಡುವಂತಹ ಪಂಚರತ್ನ ರಥಯಾತ್ರೆಗೆ ಇಲ್ಲೂ ಕೂಡಾ ಅಭೂತಪೂರ್ವವಾದ ಸ್ಪಂದನೆ ದೊರಕಿದೆ. ರಾಜ್ಯದಲ್ಲಿ ಹೊಸ ಬದಲಾವಣೆ ಬೇಕೆಂಬುದು ಜನಾಭಿಪ್ರಾಯ ಎಂಬುದು ನನ್ನ ಅಭಿಪ್ರಾಯ. ಈಗಾಗಲೇ ನಾನು ರಾಜ್ಯದ 78 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ಕೊಟ್ಟಿದ್ದೇನೆ. ಈ ಭಾಗ ಆ ಭಾಗ ಅಂತಿಲ್ಲ. ರಾಜ್ಯದ ಬಹುತೇಕ ಎಲ್ಲ ಜನರ ಅಭಿಪ್ರಾಯವೂ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕಾರ ಮಾಡುವುದೇ ಆಗಿದೆ ಎಂದು ಹೇಳಿದರು. ಆದ್ದರಿಂದ ಈ ಬಾರಿ ಜನತಾದಳದ ಪರವಾದ ಒಂದು ಅಲೆ ಪ್ರಾರಂಭವಾಗಿದೆ ಎಂದರು.