ತುಮಕೂರು :ಇಲ್ಲಿಂದ ಆಯ್ಕೆಯಾದ 25 ಸಂಸದರು ರಾಜ್ಯದಲ್ಲಿ ಏನೇ ಸಣ್ಣ-ಪುಟ್ಟ ಗಲಾಟೆಯಾದರೂ ಕೋಮುವಾದಿ ಬಣ್ಣವನ್ನು ಕಟ್ಟುವ ಕಾರ್ಯ ಮಾಡುತ್ತಿದ್ದಾರೆ. ಮೊದಲು ಅವರು ತಮ್ಮ ಕಾರ್ಯವ್ಯಾಪ್ತಿ ಏನು ಎಂಬುದನ್ನು ಸ್ಪಷ್ಟಪಡಿಸಿಕೊಳ್ಳುವ ಮೂಲಕ ರಾಜ್ಯದ ಜನತೆಗೆ ತಮ್ಮ ಕೊಡುಗೆ ಏನು ಎಂಬುದನ್ನು ತಿಳಿಸಲಿ ಎಂದು ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಎಲ್ಲ ಸಂಸದರಲ್ಲಿ ಮನವಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ 25 ಸಂಸದರ ಕಾರ್ಯವ್ಯಾಪ್ತಿ ಏನು ಎಂಬುದು ನನಗೆ ತಿಳಿಯದಂತಾಗಿದೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ಸಂಸದರು ಸೇತುವೆಯಂತೆ ಕಾರ್ಯನಿರ್ವಹಿಸಬೇಕಿದೆ ಎಂದರು.
25 ಸಂಸದರು ಎಲ್ಲಿದ್ದಾರೆ?
ಭಾರತ ಸರ್ಕಾರದ ಪ್ರಧಾನಮಂತ್ರಿ ಹಾಗೂ ಕೇಂದ್ರದ ಆರೋಗ್ಯ ಮಂತ್ರಿಗಳಿಂದ ರಾಜ್ಯಕ್ಕೆ ಕೋವಿಡ್-19 ಹಿನ್ನೆಲೆಯಲ್ಲಿ ಯಾವ ಸೌಲಭ್ಯವನ್ನು ತಂದಿದ್ದಾರೆ ಎಂಬ ವಿಚಾರಗಳ ಬಗ್ಗೆ ಇಲ್ಲಿಯವರೆಗೂ ಯಾವ ಸಂಸದರೂ ಸ್ಪಷ್ಟ ಮಾಹಿತಿ ನೀಡಿಲ್ಲ ಎಂದು ಸಂಸದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಭಾರತ ಸರ್ಕಾರದ ಆರೋಗ್ಯ ಸಚಿವರ ಹೆಸರು ಏನು ಎಂಬುದೇ ಗೊತ್ತಿಲ್ಲ. 25 ಸಂಸದರಲ್ಲಿ ನಾನು ಮನವಿ ಮಾಡುವುದೇನೆಂದರೆ, ಮೊದಲು ನಿಮ್ಮ ಕಾರ್ಯವ್ಯಾಪ್ತಿ ಏನು ಎಂಬುದನ್ನು ಸ್ಪಷ್ಟಪಡಿಸಿಕೊಳ್ಳುವ ಮೂಲಕ ರಾಜ್ಯದ ಜನತೆಗೆ ನಿಮ್ಮ ಕೊಡುಗೆ ಏನು ಎಂಬುದನ್ನು ತಿಳಿಸಿ ಎಂದರು.
ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಜಾರಿಯಾದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡುವುದು, ಕೆರೆ ಕಟ್ಟೆ ತುಂಬಿದ್ದರೆ ಬಾಗಿನ ಅರ್ಪಿಸುವ ಕಾರ್ಯ ಮಾಡುವುದನ್ನು ಬಿಟ್ಟರೆ ಬೇರಾವ ಕಾರ್ಯಗಳನ್ನು ಸಂಸದರು ಮಾಡುತ್ತಿಲ್ಲ ಎಂದು ಆರೋಪಿಸಿದರು.