ಕರ್ನಾಟಕ

karnataka

ETV Bharat / state

ತುಮಕೂರು: ಗ್ರಾಮೀಣ ಶಾಲೆಗಳ ಮಕ್ಕಳ ಕೈ, ಪಾದಗಳಲ್ಲಿ ಕಪ್ಪು ಚುಕ್ಕೆಗಳು, ಪೋಷಕರಲ್ಲಿ ಆತಂಕ - Thuruvekere MLA T Krishnappa

ತುಮಕೂರು ಜಿಲ್ಲೆಯ ಕೆಲವು ಗ್ರಾಮೀಣ ಪ್ರದೇಶಗಳ ಶಾಲಾ ಮಕ್ಕಳ ಕೈ ಹಾಗೂ ಪಾದಗಳಲ್ಲಿ ಕಪ್ಪು ಚುಕ್ಕೆಗಳು ಕಾಣಿಸಿಕೊಂಡಿದ್ದು, ಪೋಷಕರಲ್ಲಿ ಆತಂಕ ಮೂಡಿದೆ.

Skin infection
ಶಾಲೆ ಸಮೀಪ ಅನೈರ್ಮಲ್ಯ: ಮಕ್ಕಳ ಕೈ, ಪಾದಗಳಲ್ಲಿ ಕಾಣಿಸಿಕೊಂಡ ಕಪ್ಪು ಚುಕ್ಕೆಗಳು, ಪೋಷಕರಲ್ಲಿ ಆತಂಕ

By

Published : Jun 26, 2023, 6:31 PM IST

ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ಮಾತನಾಡಿದರು.

ತುಮಕೂರು:ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಶಾಲಾ ಮಕ್ಕಳ ಕೈ ಹಾಗೂ ಪಾದಗಳಲ್ಲಿ ಇದ್ದಕ್ಕಿದ್ದಂತೆ ಕಪ್ಪು ಚುಕ್ಕೆಗಳು ಕಾಣಿಸಿಕೊಂಡಿವೆ. ಮಕ್ಕಳಿಗೆ ಅನಾರೋಗ್ಯ ಕಾಡುತ್ತಿದ್ದು ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ತುರುವೇಕೆರೆ ಹಾಗೂ ಕೊರಟಗೆರೆ ತಾಲೂಕುಗಳ ಗ್ರಾಮಗಳ ಶಾಲಾ ಮಕ್ಕಳ ಕೈ ಮತ್ತು ಪಾದಗಳಲ್ಲಿ ಚರ್ಮದ ಸೋಂಕು ಕಂಡುಬಂದಿದೆ.

ತುರುವೇಕೆರೆ ತಾಲ್ಲೂಕಿನ ಕುಣಿಕೇನಹಳ್ಳಿಯ ಗ್ರಾಮದ 21 ಮಕ್ಕಳ ಪಾದಗಳಲ್ಲಿ ಕಪ್ಪು ಚುಕ್ಕೆಗಳು ಕಂಡುಬಂದಿವೆ. ಕೊರಟಗೆರೆ ತಾಲ್ಲೂಕಿನ ಯಲಚೇನಹಳ್ಳಿ ಗ್ರಾಮದ 5 ಮಕ್ಕಳ ಕೈ ಹಾಗೂ ಪಾದಗಳಲ್ಲಿ ಕಪ್ಪು ಮಚ್ಚೆಗಳು ಗೋಚರಿಸಿವೆ. ಕಳೆದ ಶನಿವಾರದಿಂದ ಕಪ್ಪು ಚುಕ್ಕಿಗಳು ಕಾಣಿಸಿಕೊಂಡಿವೆ. ಶಾಲೆಯಿಂದ ಮನೆಗೆ ಮಕ್ಕಳು ವಾಪಸ್ ಬಂದ ಬಳಿಕ ಈ ಸೋಂಕು ಕಾಣಿಸಿಕೊಂಡಿದೆ. ಶಾಲೆಯ ಶಿಕ್ಷಕರೊಬ್ಬರ ಪಾದಗಳಲ್ಲೂ ಕೂಡ ಮಚ್ಚೆಗಳು ಕಂಡುಬಂದಿವೆ.

ಶಾಲೆಗೆ ಭೇಟಿ ಕೊಟ್ಟ ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ಹಾಗೂ ವೈದ್ಯರ ತಂಡ, ಮಕ್ಕಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಜಿಲ್ಲಾ ಆರೋಗ್ಯ ಇಲಾಖೆ ಈ ಕುರಿತು ಎಚ್ಚೆತ್ತುಕೊಂಡಿದ್ದು, ಮುಂದಿನ ಕ್ರಮವಹಿಸಿದೆ.

ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ಮಾತನಾಡಿ, ''ಶಾಲಾ ಆವರಣದ ಸಮೀಪ ತಿಪ್ಪೇಗುಂಡಿ ಇದ್ದು, ಅದರಿಂದ ಹೊರ ಬರುತ್ತಿರುವಂತಹ ಸಣ್ಣ ಹುಳುಗಳು ಈ ರೀತಿ ಮಕ್ಕಳ ಅಂಗೈ ಹಾಗೂ ಅಂಗಾಲುಗಳಲ್ಲಿ ಸೋಂಕು ಕಂಡು ಬರಲು ಕಾರಣವಾಗಿದೆ. ಈ ಕುರಿತಂತೆ ತಾಲೂಕು ವೈದ್ಯಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ'' ಎಂದು ತಿಳಿಸಿದರು. ಯಾವುದಕ್ಕೂ ಮುಂಜಾಗ್ರತಾ ಕ್ರಮವಾಗಿ ಶಾಲಾ ಸುತ್ತಲಿನ ಆವರಣದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಇದರ ಜೊತೆಗೆ ತಿಪ್ಪೇಗುಂಡಿಯನ್ನು ಬೇರೆಕಡೆಗೆ ಸ್ಥಳಾಂತರಿಸಲು ಸೂಚನೆ ನೀಡಲಾಗಿದೆ'' ಎಂದು ಹೇಳಿದರು.

ಬಿಸಿಯೂಟ ಸೇವಿಸಿದ್ದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ:ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವನೆ ಮಾಡಿದ್ದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹೊಟ್ಟೆನೋವು, ವಾಂತಿ ಭೇದಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯ ಹುಮನಾಬಾದ್ ​ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಜೂ.23ರಂದು ದಾಖಲಿಸಲಾಗಿತ್ತು. ಹುಮನಾಬಾದ್​ ತಾಲೂಕಿನ ನಿಂಬೂರ್ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳು ಬಿಸಿಯೂಟದ ಅನ್ನ ಸಾಂಬಾರ್ ಸೇವಿಸಿದ್ದರಿಂದ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಬಳಿಕ ವಾಂತಿ ಭೇದಿಯಾಗಿ ತೀವ್ರ ಅಸ್ವಸ್ಥಗೊಂಡಿದ್ದರು.

ಕೆಲವು ವಿದ್ಯಾರ್ಥಿಗಳಲ್ಲಿ ಮೊದಲು ಹೊಟ್ಟೆ ನೋವು, ವಾಂತಿ ಭೇದಿ ಶುರುವಾಗಿತ್ತು. ನಂತರ ಮನೆಗೆ ತೆರಳಿದ ಇನ್ನುಳಿದ ವಿದ್ಯಾರ್ಥಿಗಳಲ್ಲಿಯು ವಾಂತಿ ಭೇದಿಯಾಗಿದೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾದ ವಿಷಯ ತಿಳಿದು, ಶಾ‌ಸಕ ಡಾ.ಸಿದ್ದಲಿಂಗಪ್ಪ ಪಾಟೀಲ, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ‌, ಭೀಮರಾವ ಪಾಟೀಲ ಭೇಟಿ ನೀಡಿದರು. ‌ವೈದ್ಯರೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳ ಆರೋಗ್ಯದ ಕುರಿತು ಮಾಹಿತಿ ಪಡೆದುಕೊಂಡರು. ಊಟದಲ್ಲಿ ಏರುಪೇರು ಆಗಿದ್ದರಿಂದ ಈ ರೀತಿ ತೊಂದರೆಯಾಗಿದೆ. ಯಾವುದೇ ಸಮಸ್ಯೆಯಾಗುವುದಿಲ್ಲ. ಎಲ್ಲ ವಿದ್ಯಾರ್ಥಿಗಳು ಆದಷ್ಟು ಬೇಗ ಗುಣಮುಖರಾಗಲಿದ್ದಾರೆ ಎಂದು ಹುಮನಾಬಾದ್ ಸರ್ಕಾರಿ ಆಸ್ಪತ್ರೆಯ ಮುಖ್ಯಾಧಿಕಾರಿ ಡಾ.ನಾಗನಾಥ ಹುಲಸೂರೆ ತಿಳಿಸಿದ್ದರು.

ಇದನ್ನೂ ಓದಿ:School bag weight: ಶಾಲಾ ಮಕ್ಕಳ ಮಣಭಾರದ ಬ್ಯಾಗ್​ಗೆ ಬ್ರೇಕ್: ತೂಕ ಮಿತಿ ನಿಗದಿಗೊಳಿಸಿದ ಸರ್ಕಾರ

ABOUT THE AUTHOR

...view details