ತುಮಕೂರು:ಕಾಂಗ್ರೆಸ್ ಪಕ್ಷದ ಬಲವನ್ನು ಕುಗ್ಗಿಸುವ ಉದ್ದೇಶದಿಂದ ಕೇಂದ್ರ ಬಿಜೆಪಿ ಸರ್ಕಾರ ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರ ಶ್ರೀಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಮೇಲೆ ಐಟಿ ದಾಳಿ ನಡೆಸಿದೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಆರ್. ರಾಮಕೃಷ್ಣ ಆರೋಪಿಸಿದ್ದಾರೆ.
ಕಾಂಗ್ರೆಸ್ ಬಲ ಕುಗ್ಗಿಸೋದೆ ಬಿಜೆಪಿ ಬಯಕೆ, ಅದಕ್ಕೇ ಈ ದಾಳಿ: ರಾಮಕೃಷ್ಣ ಕಿಡಿಕಿಡಿ - ಐಟಿ ದಾಳಿ ವಿಚಾರ
ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರ ಮನೆ, ಸಂಸ್ಥೆಗಳ ಮೇಲೆ ಉದ್ದೇಶಪೂರ್ವಕವಾಗಿ ಬಿಜೆಪಿ ಸರ್ಕಾರ ಐಟಿ ದಾಳಿ ನಡೆಸಿದೆ. ಈ ಮೂಲಕ ಕಾಂಗ್ರೆಸ್ ಪಕ್ಷದ ಬಲವನ್ನು ಕುಗ್ಗಿಸುವ ಉದ್ದೇಶ ಹೊಂದಿದೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಆರ್. ರಾಮಕೃಷ್ಣ ಆರೋಪಿಸಿದ್ದಾರೆ
ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಡಿ, ಸಿಬಿಐ, ಐಟಿ, ಚುನಾವಣಾ ಆಯೋಗ ಇವೆಲ್ಲವೂ ಸರ್ಕಾರದ ಸ್ವಾಯತ್ತ ಸಂಸ್ಥೆಗಳು. ಮೋದಿ ಹೇಳಿದಂತೆ ಇಲಾಖೆಗಳು ಕೇಳುತ್ತಿವೆ. ರಾಷ್ಟ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಮುಖಂಡರ ಮೇಲೆ ದಾಳಿ ಮಾಡಿಸುವ ಮೂಲಕ ಅವರನ್ನು ಬಂಧಿಸಲಾಗುತ್ತದೆ. ರಾಜ್ಯದಲ್ಲಿ ಅಧಿವೇಶನ ಶುರುವಾಗಿದೆ. ನೆರೆ ಸಮಸ್ಯೆಗೆ ಸಿಲುಕಿರುವ ಸಾರ್ವಜನಿಕರಿಗೆ ಪರಿಹಾರದ ಹಣ ಇಲ್ಲಿಯವರೆಗೂ ದೊರೆತಿಲ್ಲ. ಅದನ್ನು ಮರೆ ಮಾಚುವ ಉದ್ದೇಶದಿಂದ ರಾಜ್ಯದ ಜನರ ಗಮನ ಬೇರೆ ಕಡೆ ಸೆಳೆಯುವುದಕ್ಕಾಗಿ ಈ ರೀತಿ ದಾಳಿ ನಡೆಸುತ್ತಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಬಲ ಕುಗ್ಗಿಸಲು ಈ ತಂತ್ರ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.