ತುಮಕೂರು :ಶಿರಾ ವಿಧಾನಸಭಾ ಉಪಚುನಾವಣೆ ಬಿರುಸು ಕಂಡಿದೆ. ಬಿಜೆಪಿ ಪಕ್ಷದಲ್ಲಿ ಟಿಕೆಟ್ ಹಂಚಿಕೆ ಕುರಿತು ಎದ್ದಿರುವ ಅಸಮಾಧಾನ ಮುಗಿಲುಮುಟ್ಟಿದೆ. ಪಕ್ಷದ ಮೂಲ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕೆಂದು ಕಾರ್ಯಕರ್ತರು ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ. ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಮುಖಂಡರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ಧ್ವನಿ ಎತ್ತಿದ್ದಾರೆ.
ಬಿಜೆಪಿ ಮೂಲ ಕಾರ್ಯಕರ್ತರಿಗೆ ಟಿಕೆಟ್ ನೀಡಲು ಒತ್ತಾಯ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿರುವ ಎಸ್ ಆರ್ ಗೌಡ ಅಥವಾ ಮಂಜುನಾಥ್ ಅವರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿ ಕಾರ್ಯಕರ್ತರು ಶಿರಾ ನಗರದ ಪಟ್ಟಣದಲ್ಲಿಂದು ಪ್ರತಿಭಟನೆ ನಡೆಸಿದರು. ಈಗಾಗಲೇ ಶಿರಾ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ. ರಾಜೇಶ್ ಗೌಡ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದು ಸ್ಥಳೀಯ ಕಾರ್ಯಕರ್ತರಲ್ಲಿ ತಳಮಳ ಉಂಟುಮಾಡಿದೆ.
ಇದರಿಂದಾಗಿ ಪಕ್ಷದ ಮೂಲ ಮುಖಂಡರಿಗೆ ಅದರಲ್ಲೂ ಮುಖ್ಯವಾಗಿ ಮಂಜುನಾಥ್ ಹಾಗೂ ಎಸ್ ಆರ್ ಗೌಡ ಅವರಿಗೆ ಟಿಕೆಟ್ ದೊರೆಯುವುದು ಅನುಮಾನ ವ್ಯಕ್ತವಾಗಿರುವ ಹಿನ್ನೆಲೆ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ಇಂದು 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಶಿರಾ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಮೂಲ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕೆಂದು ಬಿಜೆಪಿ ಹೈಕಮಾಂಡ್‌ನ ಒತ್ತಾಯಿಸಿದ್ದಾರೆ.
ಶಿರಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈಗಾಗಲೇ ಬಿಜೆಪಿ ಪಕ್ಷವನ್ನು ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಎಪಿಎಂಸಿ ವ್ಯಾಪ್ತಿಯಲ್ಲಿ ಎಸ್ಆರ್ ಗೌಡ ಹಾಗೂ ಬಿಕೆ ಮಂಜುನಾಥ್ ಕಟ್ಟಿ ಬೆಳೆಸಿದ್ದಾರೆ. ಆದರೆ, ಚುನಾವಣೆ ನಡೆಸಲು ಹಣವಿಲ್ಲ ಎಂಬ ಒಂದು ಮಾತಿನ ಹಿನ್ನೆಲೆ ಟಿಕೆಟ್ ನೀಡಲು ಪಕ್ಷದ ಮುಖಂಡರು ನಿರಾಕರಿಸುತ್ತಿರುವುದು ಸಾಕಷ್ಟು ನಿರಾಸೆ ತಂದಿದೆ.
ಕ್ಷೇತ್ರದಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿದ್ದಾರೆ. ಹಣವೊಂದೇ ಮಾನದಂಡವಾಗುವುದಿಲ್ಲ. ನಾವೆಲ್ಲರೂ ಸೇರಿ ಬಿಜೆಪಿ ಪಕ್ಷದ ಅಭ್ಯರ್ಥಿ ಗೆಲ್ಲಿಸುತ್ತೇವೆ. ಹೀಗಾಗಿ, ಇಬ್ಬರಲ್ಲಿ ಯಾರಿಗಾದ್ರೂ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.