ತುಮಕೂರು: ತುಮಕೂರು ತಾಲೂಕು ಚಿಕ್ಕಹಳ್ಳಿ ಗ್ರಾಮದಲ್ಲಿ ನಡೆದ ಅತ್ಯಾಚಾರ ಪ್ರಕರಣದ ಆರೋಪಿಯ ಸುಳಿವು ಪತ್ತೆ ಹಚ್ಚಲು ಒಂದು ಲಕ್ಷ ಮಂದಿಯ ಮೊಬೈಲ್ ನಂಬರ್ಗಳನ್ನು ತನಿಖೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ಗೌಡ ತಿಳಿಸಿದ್ದಾರೆ.
ತುಮಕೂರಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಆರೋಪಿ ಸುಳಿವು ಬಿಟ್ಟು ಹೋಗಿಲ್ಲ. ಹೀಗಾಗಿ ಘಟನೆ ನಡೆದ ಸ್ಥಳದ ಸುತ್ತಮುತ್ತಲು, ಆ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೊಬೈಲ್ ನಂಬರ್ಗಳನ್ನು 20 ಪೊಲೀಸರ ತಂಡಗಳು ಪತ್ತೆ ಹಚ್ಚಿ ನಿರಂತರವಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಘಟನೆ ನಡೆದ ಸ್ಥಳದ ಸುತ್ತಮುತ್ತಲ 3 ಮೊಬೈಲ್ ಟವರ್ಗಳಲ್ಲಿನ ಮೊಬೈಲ್ ನಂಬರ್ಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಇದು ಪೊಲೀಸರಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಇತ್ತೀಚೆಗಷ್ಟೇ ಓರ್ವ ಮಹಿಳೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದು ಚಿನ್ನದ ಸರ ಕಿತ್ತುಕೊಂಡು ಹೋಗಿದ್ದ ಘಟನೆಗೂ ಅತ್ಯಾಚಾರ ಘಟನೆಗೂ ತಾಳೆ ಹಾಕಲಾಗುತ್ತಿದೆ ಎಂದರು.