ತುಮಕೂರು: ಜಿಲ್ಲೆಯ ಮಧುಗಿರಿ ತಾಲೂಕಿನ ವಿವಿಧೆಡೆ ಕರಡಿ ದಾಳಿ ಮಾಡಿರುವ ಘಟನೆ ನಡೆದಿದ್ದು, ಕರಡಿ ದಾಳಿಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಮಹಿಳೆಯರು ಕರಡಿ ದಾಳಿಯಿಂದ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸವನಹಳ್ಳಿ ಗ್ರಾಮದ ಜ್ಯೋತಿ, ಸಿದ್ದಾಪುರ ಗ್ರಾಮದ ಲಕ್ಷ್ಮಮ್ಮ, ಬಂಡೇನಹಳ್ಳಿ ಗ್ರಾಮದ ಪಾರ್ವತಮ್ಮ ಗಾಯಗೊಂಡ ರೈತ ಮಹಿಳೆಯರಾಗಿದ್ದಾರೆ. ಇವರೆಲ್ಲರೂ ತಮ್ಮ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ 2 ಕರಡಿಗಳು ದಾಳಿ ನಡೆಸಿವೆ.
ಮಹಿಳೆಯರ ಮೇಲೆ ಕರಡಿ ದಾಳಿ, ಪ್ರತಿಭಟನೆ ಬಂಡೇನಹಳ್ಳಿ ಗ್ರಾಮದಲ್ಲಿ ಪಾರ್ವತಮ್ಮ ಎಂಬುವರು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕರಡಿ ದಾಳಿ ನಡೆಸಿದೆ. ಅದರಿಂದ ತಪ್ಪಿಸಿಕೊಳ್ಳಲು ಅವರು ಕಿರುಚಿದ್ದು, ಅಕ್ಕಪಕ್ಕದಲ್ಲಿದ್ದ ರೈತರು ಬಂದು ಕರಡಿಯನ್ನು ಓಡಿಸಿದ್ದಾರೆ. ಅದೇ ರೀತಿ ಬಸವನಹಳ್ಳಿ ಗ್ರಾಮದ ಜ್ಯೋತಿ ಎಂಬುವರು ಕೂಡ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕರಡಿ ದಾಳಿ ನಡೆಸಿದೆ. ಇದನ್ನು ಕಂಡ ಅಕ್ಕಪಕ್ಕದ ಜಮೀನಿನಲ್ಲಿದ್ದ ರೈತರು ಕರಡಿಯನ್ನು ಓಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:ಚಿಕ್ಕೋಡಿ: ವಿಚಾರಣಾಧೀನ ಕೈದಿ ಪೊಲೀಸ್ ಠಾಣೆಯಿಂದಲೇ ಎಸ್ಕೇಪ್
ಕರಡಿಗಳು ನಿರಂತರವಾಗಿ ದಾಳಿ ನಡೆಸುತ್ತಿದ್ದು, ಈ ಕರಡಿ ಹಾವಳಿಯನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಬ್ರಹ್ಮಸಂದ್ರ ಗೇಟ್ ಬಳಿ ಧರಣಿ ನಡೆಸಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಬೋನ್ ಇರಿಸಿ ಕರಡಿ ಸೆರೆಹಿಡಿಯುವುದಾಗಿ ಭರವಸೆ ನೀಡಿದ್ದಾರೆ.