ತುಮಕೂರು:ನರೇಂದ್ರ ಮೋದಿ ಕಾಮಧೇನುವಿನ ರೀತಿಯಲ್ಲಿ ರಾಜ್ಯಕ್ಕೆ ಕೇಳದೇ ಹಲವಾರು ಯೋಜನೆಗಳನ್ನು ನೀಡಿದ್ದಾರೆ. ಅವರ ಮುಂದೆ ಕೈಕಟ್ಟಿ ನಿಲ್ಲುವ ಅಗತ್ಯವೇ ಇಲ್ಲ. ಕೇಳುವ ಮೊದಲೇ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದ ಬಸವರಾಜ ಬೊಮ್ಮಾಯಿ ಸಿದ್ದರಾಮಯ್ಯ ಅವರ ನಾಯಿಮರಿ ಟೀಕೆಗೆ ವೇದಿಕೆಯಲ್ಲೇ ಪ್ರತ್ಯುತ್ತರ ನೀಡಿದರು.
ತುಮಕೂರು ಜಿಲ್ಲೆಯ ಶಿರಾ ನಗರದಲ್ಲಿ ನಡೆದ ಬಿಜೆಪಿಯ ಜನಸಂಕಲ್ಪ ಸಮಾವೇಶ ಮಾತನಾಡಿದರು. ರಾಜ್ಯಕ್ಕೆ ನರೇಂದ್ರ ಮೋದಿ ಏನು ಕೊಡುಗೆ ಕೊಟ್ಟಿದ್ದಾರೆ. ಅವರ ಮುಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಿಮರಿ ರೀತಿ ನಿಲ್ಲುತ್ತಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಕ್ಕೆ ವೇದಿಕೆಯಲ್ಲೆ ತಿರುಗೇಟು ನೀಡಿದರು. ನೀವು ಅಧಿಕಾರದಲ್ಲಿದ್ದಾಗ ಸೋನಿಯಾ ಗಾಂಧಿ ಮನೆ ಬಳಿ ಕಾದು ನಿಂತು ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ರಾಜ್ಯಕ್ಕೆ ತರದೇ ವಾಪಸ್ ಆಗುತ್ತಿದ್ದಿರಿ ಎಂದು ಟೀಕಿಸಿದ್ದಾರೆ.
ಅಲ್ಲದೇ ರಾಹುಲ್ ಗಾಂಧಿ ಎದುರು ಕೈಕಟ್ಟಿನಿಲ್ಲುವ ನಿಮ್ಮಿಂದ ನಾವು ಪಾಠ ಕಲಿಯಬೇಕಿಲ್ಲ. ಪ್ರಧಾನಿ ನರೇಂದ್ರ ಮೋದಿ ಅಪ್ಪಟ ಪ್ರಜಾಪ್ರಭುತ್ವವಾದಿಯಾಗಿದ್ದಾರೆ. ಪ್ರತಿಯೊಂದು ರಾಜ್ಯದ ಸ್ವಾಯತ್ತತೆಯನ್ನು ಎತ್ತಿ ಹಿಡಿದಿದ್ದಾರೆ. ಹತ್ತು ಹಲವಾರು ಯೋಜನೆಗಳನ್ನು ನಮ್ಮ ರಾಜ್ಯಕ್ಕೆ ಕೊಟ್ಟಿದ್ದಾರೆ. ಅಲ್ಲದೇ 6,000 ಕಿಮೀ ರಾಷ್ಟ್ರೀಯ ಹೆದ್ದಾರಿಯನ್ನು ರಾಜ್ಯಕ್ಕೆ ನೀಡಿದ್ದಾರೆ ಇದು ಅಭಿವೃದ್ಧಿಯ ಪಥ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ತುಮಕೂರು ಜಿಲ್ಲೆಯ 3,14,149 ಜನ ರೈತರಿಗೆ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ 10 ಸಾವಿರ ರೂಪಾಯಿ ಹಣ ವರ್ಗಾವಣೆ ಮಾಡಲಾಗಿದೆ. ಉಡಾನ್ ಯೋಜನೆ ಅಡಿ ವಿಮಾನ ನಿಲ್ದಾಣ ಮಾಡಲಾವುದು. ಅರಸೀಕೆರೆ ತುಮಕೂರು ಡಬಲ್ ಟ್ರ್ಯಾಕ್ ರೈಲ್ವೆ ಮಾರ್ಗವನ್ನು ವಿದ್ಯುದೀಕರಣ ಮಾಡಲಾಗಿದೆ. ನರ್ಸಿಂಗ್ ಕಾಲೇಜು ಮತ್ತು ಹಾಸ್ಟೆಲ್ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ನೀಡಿಯಾಗಿದೆ. ಚೆನ್ನಿಗರಾಯ ಸ್ವಾಮಿ ಅಧ್ಯಯನ ಪೀಠ ಸ್ಥಾಪಿಸುವುದಾಗಿ ಘೋಷಣೆ ಮಾಡಲಾಗಿದೆ. ವಿಶ್ವದ ಅತಿ ಎತ್ತರದ 161 ಅಡಿಯ ಪಂಚಮುಖಿ ಆಂಜನೇಯ ಪ್ರತಿಮೆ ಅನಾವಣ ಆಗಲಿದೆ. ಇದೆಲ್ಲವೂ ಬಿಜೆಪಿ ಸರ್ಕಾರ ಕೇಂದ್ರದ ಸಹಕಾರದಿಂದ ಒಂದು ಜಿಲ್ಲೆಗೆ ಕೊಟ್ಟ ಕೊಡುಗೆ ಎಂದು ಮುಖ್ಯಮಂತ್ರಿ ಹೇಳಿದರು.