ತುಮಕೂರು: ಅಲ್ಲಮ ಪ್ರಭು, ಅಕ್ಕಮಹಾದೇವಿ ಅವರ ಸಾಲಿನಲ್ಲಿ ಗುರು ಸಿದ್ದರಾಮೇಶ್ವರ ನಿಲ್ಲುತ್ತಾರೆ. ಸಾಮಾಜಿಕ ಮತ್ತು ವಚನ ಕ್ರಾಂತಿಗಾಗಿ ನಾಡಿನೆಲ್ಲೆಡೆ ಸಂಚರಿಸಿ ಜನರ ನೀರಿನ ದಾಹ ಇಂಗಿಸುವ ಜೊತೆಗೆ ಕಾಯಕ ನಿಷ್ಠೆ, ಕೃಷಿ ಪರತೆ, ಉತ್ತಮ ಆದರ್ಶ ಗುಣಗಳನ್ನು ಸಮಾಜಕ್ಕೆ ನೀಡಿದ ಗುರು ಸಿದ್ದರಾಮೇಶ್ವರರು ಸದಾ ಪ್ರೇರಕ ಶಕ್ತಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟರು. ತಿಪಟೂರು ಪಟ್ಟಣದಲ್ಲಿ ನಡೆದ ಗುರು ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಳೆದ ಅನೇಕ ವರ್ಷಗಳಿಂದ ಗುರು ಸಿದ್ದರಾಮೇಶ್ವರರ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇನೆ. ಅವರ ಕಾರ್ಯಕ್ರಮ ಎಲ್ಲೇ ನಡೆದರೂ ನಾನು ಪಾಲ್ಗೊಳ್ಳುತ್ತೇನೆ. ನಾಡಿನ ಮಠ-ಮಾನ್ಯಗಳ ಮೇಲೆ ಅಪಾರ ಭಕ್ತಿ ಹೊಂದಿದ್ದು, ನಾನು ಸಿಎಂ ಆಗಿದ್ದಾಗ ರೈತರಿಗಾಗಿ, ಹಾಲು ಉತ್ಪಾದಕರಿಗಾಗಿ ಅನೇಕ ಯೋಜನೆಗಳನ್ನು ತಂದಿದ್ದೇನೆ. ಮಠ ಮಾನ್ಯಗಳ ಅಭಿವೃದ್ಧಿಗಾಗಿ ಅನುದಾನ ಕೊಟ್ಟಿದ್ದೇನೆ ಎಂದು ನೆನಪು ಮಾಡಿಕೊಂಡರು.
'ಮೋದಿ ಒಂದು ದಿನವೂ ವಿಶ್ರಾಂತಿ ತೆಗೆದುಕೊಂಡಿಲ್ಲ': ಹೆಣ್ಣು ಮಕ್ಕಳು ಹುಟ್ಟಿದರೆ ಕಣ್ಣೀರು ಹಾಕುತಿದ್ದರು. ನಾನು ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದು ಆ ಕಣ್ಣೀರು ಒರೆಸಿದ್ದೇನೆ. ಇಂದು 25 ಲಕ್ಷ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆಯ ಹಣ ಸಿಕ್ಕಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ತಮ್ಮದೇ ಆದ ಕೊಡುಗೆ ಕೊಟ್ಟಿದ್ದಾರೆ. ಇಡೀ ವಿಶ್ವವೇ ಪ್ರಧಾನಿಯನ್ನು ಹಾಡಿ ಹೊಗಳುತ್ತಿದೆ. ಕಳೆದ 8 ವರ್ಷದಲ್ಲಿ ಒಂದು ದಿನವೂ ಅವರು ವಿಶ್ರಾಂತಿ ತೆಗೆದುಕೊಂಡಿಲ್ಲ. ನಮ್ಮ ದೇಶವನ್ನು ಎತ್ತರಕ್ಕೆ ಕೊಂಡೊಯ್ಯುತಿದ್ದಾರೆ. ಯವಕರಿಗೆ ಮೋದಿ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ:ಅದ್ಧೂರಿಯಾಗಿ ಜರುಗಿದ 849ನೇ ಗುರು ಸಿದ್ದರಾಮೇಶ್ವರ ಜಯಂತಿ ಮೆರವಣಿಗೆ