ತುಮಕೂರು :ಸ್ನೇಹಿತನ ಜೊತೆ ತೆರಳಿದ್ದ ಆಟೋ ಚಾಲಕ ಶವವಾಗಿ ಮಧುಗಿರಿ- ಗೌರಿಬಿದನೂರು ಬೈಪಾಸ್ ರಸ್ತೆಯಲ್ಲಿ ಪತ್ತೆಯಾಗಿದ್ದಾರೆ. ಮಧುಗಿರಿ ಪಟ್ಟಣದ ಶ್ರೀಧರ್ ಮೂರ್ತಿ (45) ಮೃತರು. ಇಟ್ಟಿಗೆ ಫ್ಯಾಕ್ಟರಿ ಬಳಿ ದೊರತಿರುವ ಶವವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಮೇ 4 ರಂದು ಶ್ರೀಧರ್ ಮೂರ್ತಿ ತನ್ನ ಸ್ನೇಹಿತ ವೆಂಕಟೇಶ್ ಜೊತೆ ಬಾಡಿಗೆ ಇದೆ ಎಂದು ಮನೆಯಿಂದ ಹೋಗಿದ್ದರು. ರಾತ್ರಿಯಾದರೂ ಮನೆಗೆ ಬಾರದೇ ಇದ್ದಾಗ ಕುಟುಂಬಸ್ಥರು ಗಾಬರಿಗೊಂಡು ವೆಂಕಟೇಶ್‌ಗೆ ಕರೆ ಮಾಡಿ ಶ್ರೀಧರ್ ಮೂರ್ತಿ ಬಗ್ಗೆ ವಿಚಾರಿಸಿದ್ದಾರೆ. ಯಾರೋ ಮೂವರ ಜೊತೆ ಕಾರಿನಲ್ಲಿ ತೆರಳಿದ್ದಾಗಿ ಅವರು ಹೇಳಿದ್ದಾರೆ. ಆದರೆ ಬೆಳಗ್ಗೆ ಹೊತ್ತಿಗೆ ಶ್ರೀಧರ್ ಮೂರ್ತಿ ಮೃತದೇಹ ಸಿಕ್ಕಿರುವ ಬಗ್ಗೆ ಕುಟುಂಬಸ್ಥರಿಗೆ ಕರೆ ಮಾಡಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ನೇಹಿತ ವೆಂಕಟೇಶ್ ಮೇಲೆ ಅನುಮಾನ ವ್ಯಕ್ತಪಡಿಸಿರುವ ಕುಟುಂಬಸ್ಥರು, ಕಾರಿನಲ್ಲಿ ಕರೆದುಕೊಂಡು ಹೋದ ಅಪರಿಚಿತರನ್ನು ಪತ್ತೆ ಹಚ್ಚಿ ಆರೋಪಿಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕು. ನಮಗೆ ನ್ಯಾಯ ಓದಗಿಸಬೇಕೆಂದು ದೂರು ನೀಡಿದ್ದಾರೆ. ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜಿ ಪಂಚಾಯಿತಿಗೆ ಹೋದವರ ಮೇಲೆ ಮಾರಣಾಂತಿಕ ಹಲ್ಲೆ: ಮತ್ತೊಂದು ಪ್ರಕರಣದಲ್ಲಿ ರಾಜಿ ಪಂಚಾಯಿತಿಗೆ ಹೋದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಕರೇಕಲ್ಲು ಗ್ರಾಮದಲ್ಲಿ ನಡೆದಿದೆ. ದಿಲೀಪ್ ಎಂಬವರ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ಮಾಡಿರುವ ಕ್ರಾಮಸಂದ್ರ ಪ್ರಸಾದಿ, ಅಬುಕನಹಳ್ಳಿ ಮಂಜ ಅಲಿಯಾಸ್ ಕೋಳಿಮಂಜ,
ಮನು ಅಲಿಯಾಸ್ ಅಲ್ಲ ಪರಾರಿಯಾಗಿದ್ದಾರೆ.
ಪ್ರಸಾದಿ ಹಾಗೂ ಕಿರಣ್ ಕುಮಾರ್ ನಡುವೆ ಹಣದ ವ್ಯವಹಾರಕ್ಕೆ ಗಲಾಟೆ ನಡೆದಿತ್ತು. ಈ ವಿಚಾರವಾಗಿ ಪ್ರಸಾದಿ ಮೇಲೆ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವೈಷಮ್ಯ ಬೆಳೆದಿತ್ತು. ಸದ್ಯ ಕಿರಣ್ ಕುಮಾರನನ್ನು ರಾಜೀಗಾಗಿ ಪ್ರಸಾದಿ ಕರೆದಿದ್ದ. ಕಿರಣ್ ಜೊತೆ ತೆರಳಿದ್ದ ಸ್ನೇಹಿತರಾದ ದಿಲೀಪ್ ಕುಮಾರ್, ಸಂಜು, ಮೋಹನ್, ಮಂಜುನಾಥ್ ಕೂಡ ಮೇ 3 ರ ರಾತ್ರಿ ಕರೆಕಲ್ಲು ಗ್ರಾಮದ ಬಳಿ ಹೋಗಿದ್ದರು.
ಈ ವೇಳೆ ಪ್ರಸಾದಿ ಹಾಗೂ ಕಿರಣ್ ಕುಮಾರ್ ಮಾತನಾಡುತ್ತಿದ್ದಾಗ ಎರಡು ಕಾರಿನಲ್ಲಿ ಬಂದ ಐದಾರು ಜನರ ಗುಂಪು ಪ್ರಸಾದಿ ಸ್ನೇಹಿತರಿಂದ ಕಿರಣ್ ಕುಮಾರ್ ಹಾಗೂ ಸ್ನೇಹಿತರ ಮೇಲೆ ಲಾಂಗ್ ಮಚ್ಚುಗಳಿಂದ ಕೊಲೆ ಯತ್ನ ನಡೆಸಿದೆ. ಕಿರಣ್ ಕುಮಾರ್, ಸಂಜು, ಮಂಜುನಾಥ್ ಹಾಗೂ ಮೋಹನ್ ತಪ್ಪಿಸಿಕೊಂಡಿದ್ದರು. ದಿಲೀಪ್ ಸಿಕ್ಕಿಬಿದ್ದ ಕಾರಣ ಮಾರಣಾಂತಿಕ ಹಲ್ಲೆ ನಡೆಸಿ, ಜೊತೆಗೆ ಕಿರಣ್ ಕುಮಾರ್ ಸ್ನೇಹಿತರು ತಂದಿದ್ದ ಮೂರು ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದರು. ದಿಲೀಪ್‌ನನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :ಪೋಷಕರು ಮದುವೆಗೆ ಒಪ್ಪದ ಕಾರಣ ಪ್ರೇಮಿಗಳು ಬಸ್ನಲ್ಲಿ ಆತ್ಮಹತ್ಯೆಗೆ ಯತ್ನ.. ಯುವತಿ ಸಾವು