ತುಮಕೂರು:ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಪ್ರತಿಭಟಿಸಲು ಬೆಂಗಳೂರಿಗೆ ಹೊರಟಿದ್ದ ಆಶಾ ಕಾರ್ಯಕರ್ತೆಯರನ್ನು ತುಮಕೂರಿನಲ್ಲಿ ಬಂಧಿಸಿದ ಘಟನೆ ನಡೆದಿದೆ.
ತುಮಕೂರಿನಲ್ಲಿ ಆಶಾ ಕಾರ್ಯಕರ್ತೆಯರ ಬಂಧನ: ಪೊಲೀಸರ ವಿರುದ್ಧ ಆಕ್ರೋಶ - ತುಮಕೂರು ಸುದ್ದಿ
ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರ್ಕಾರದ ವಿರುದ್ಧ ಪ್ರತಿಭಟಿಸಲು ಹೊರಟಿದ್ದ ಕಾರ್ಯಕರ್ತೆಯರನ್ನು ಬಂಧಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
![ತುಮಕೂರಿನಲ್ಲಿ ಆಶಾ ಕಾರ್ಯಕರ್ತೆಯರ ಬಂಧನ: ಪೊಲೀಸರ ವಿರುದ್ಧ ಆಕ್ರೋಶ Asha activists protest](https://etvbharatimages.akamaized.net/etvbharat/prod-images/768-512-8904698-114-8904698-1600843482319.jpg)
ರಾಜ್ಯ ಸರ್ಕಾರ ನೀಡಿದ ಭರವಸೆಯಂತೆ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಸಂಬಳ 12,000 ರೂ. ಕೂಡಲೇ ಘೋಷಣೆ ಮಾಡಬೇಕು ಮತ್ತು ಎರಡು ವರ್ಷದಿಂದ ಬಾಕಿ ಇರುವ ಪ್ರೋತ್ಸಾಹಧನವನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿತ್ತು. ಈ ಧರಣಿಗೆ ತುಮಕೂರಿನಿಂದ ಸಾಥ್ ನೀಡಲು ರಾಜಧಾನಿಗೆ ಹೊರಟಿದ್ದ ಆಶಾ ಕಾರ್ಯಕರ್ತೆಯರನ್ನು ಬಂಧಿಸಿ, ಚಿಲುಮೆ ಭವನದಲ್ಲಿ ಇರಿಸಿರುವುದನ್ನು ಖಂಡಿಸಿದ ಆಶಾ ಕಾರ್ಯಕರ್ತೆಯರು, ಪೊಲೀಸರ ವಿರುದ್ಧ ಚಿಲುಮೆ ಭವನದಲ್ಲಿ ಪ್ರತಿಭಟನೆ ನಡೆಸಿದರು.
ಇಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಮಟ್ಟದ ಹೋರಾಟಕ್ಕೆ ಕರೆ ನೀಡಲಾಗಿತ್ತು. ಆಶಾ ಕಾರ್ಯಕರ್ತೆಯರಿಗೆ 12,000 ರೂ. ವೇತನ ನಿಗದಿ ಮಾಡಬೇಕು. ಕಾರ್ಯಕರ್ತೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆಯನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು, ಬಾಕಿ ಇರುವ ಒಂದು ವರ್ಷದ ವೇತನವನ್ನು ಬಿಡುಗಡೆಗೊಳಿಸಬೇಕು ಎಂಬ ಬೇಡಿಕೆಗಳನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸಲು ತುಮಕೂರಿನಿಂದ ಬೆಂಗಳೂರಿಗೆ ಹೊರಟಿದ್ದ ಆಶಾ ಕಾರ್ಯಕರ್ತೆಯರನ್ನು ಬಂಧಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಂಚಾಲಕಿ ಮಂಜುಳ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.