ತುಮಕೂರು:ಜಿಲ್ಲೆಯ ಪಾವಗಡ ತಾಲೂಕಿಗೆ ಹೋಗಬೇಕಾದರೆ ಆಂಧ್ರ ಪ್ರದೇಶದ ಮಡಕಶಿರಾ ತಾಲೂಕಿನ ಮೂಲಕ ಹಾದು ಹೋಗಲೇಬೇಕು. ಇದರಿಂದ ಅಂತಾರಾಜ್ಯ ಫರ್ಮಿಟ್ ಹೊಂದಿಯೇ ಹಳದಿ ಬಣ್ಣದ ನಂಬರ್ ವಾಹನಗಳು ಹೋಗಬೇಕು ಎಂದು ಆಧ್ರದ ಆರ್ಟಿಒ ಇಲಾಖೆ ದಂಡ ವಸೂಲಿ ಮಾಡುತ್ತಿದೆಯಂತೆ.
ಪಾವಗಡಕ್ಕೆ ಹೋಗಬೇಕಾದರೆ ಆಂಧ್ರದ ಮಡಕಶಿರಾ ತಾಲೂಕಿನ ಒಳಗೆ ಪ್ರವೇಶ ಮಾಡಿಯೇ ಹೋಗಬೇಕು. ಚಂದ್ರಭಾವಿ ಮತ್ತು ರಾಜವಂತಿ ಗಡಿ ಭಾಗದ ನಡುವೆ ಸರಿಸುಮಾರು 9 ಕಿ.ಮೀ. ಆಂಧ್ರದ ಮಡಕಶಿರಾ ತಾಲೂಕಿನ ಒಳಗೆ ಹಾದುಹೋಗಬೇಕಾಗುತ್ತದೆ. ಈ ಅನಿವಾರ್ಯತೆಯೇ ಖಾಸಗಿ ಬಸ್, ಟ್ಯಾಕ್ಸಿ ಚಾಲಕರ ಸಂಕಷ್ಟಕ್ಕೆ ಕಾರಣವಾಗಿದೆ. ಗಡಿಯಲ್ಲಿ ಅಂತಾರಾಜ್ಯ ಫರ್ಮಿಟ್ ಇಲ್ಲದ ಹಳದಿ ಬೋರ್ಡ್ನ ವಾಹನಗಳಿಗೆ ದಂಡ ವಿದಿಸುತ್ತಿದ್ದಾರೆ, ದಂಡ ಕಟ್ಟದ ವಾಹನಗಳನ್ನು ಸೀಜ್ ಮಾಡುತ್ತಿದ್ದಾರೆ.
ಒಂದು ಒಪ್ಪಂದದ ಪ್ರಕಾರ ಆಂಧ್ರ ರಾಜ್ಯದೊಳಗೆ 16 ಕಿ.ಮೀ. ದೂರದವರೆಗೆ ಕರ್ನಾಟಕದ ವಾಹನಗಳು ಅಂತಾರಾಜ್ಯ ಫರ್ಮಿಟ್ ಇಲ್ಲದೇ ಓಡಾಡಬಹುದು ಎಂದಿದೆ. ಆದರೂ ಆಂಧ್ರದ ಅಧಿಕಾರಿಗಳು ಈ ನಿಯಮ ಧಿಕ್ಕರಿಸಿ ಕರ್ನಾಟಕದ ಚಾಲಕರಿಗಳಿಗೆ ರಾಕ್ಷಸರಂತೆ ವಕ್ಕರಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.