ತುಮಕೂರು:ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ಸ್ವಯಂ ಘೋಷಿತ ಬಿದನಗೆರೆಯ ಶನಿ ಮಹಾತ್ಮ ದೇವಾಲಯದ ಧನಂಜಯ ಗುರೂಜಿ ಅವರನ್ನು ಇಂದು ಅರಣ್ಯ ಇಲಾಖೆ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಆದರೆ, ವಿಚಾರಣೆ ವೇಳೆ ಯಾವುದೇ ಹುಲಿ ಉಗುರು ಪೆಂಡೆಂಟ್ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಬಿದನಗೆರೆಯಲ್ಲಿ ಶನಿಮಹಾತ್ಮ ದೇವಾಲಯದಲ್ಲಿ ಧನಂಜಯ ಗುರೂಜಿ ಅಧ್ಯಕ್ಷರಾಗಿದ್ದಾರೆ. ಸ್ವಾಮೀಜಿಯು ಕೊರಳಿನಲ್ಲಿ ಹುಲಿ ಉಗುರು ಧರಿಸಿದ್ದು, ಇದು ಅಸಲಿಯೋ? ನಕಲಿಯೋ ಎಂಬುದನ್ನು ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿ ಕೊರಟಗೆರೆ ತಾಲೂಕಿನ ಸಾಮಾಜಿಕ ಕಾರ್ಯಕರ್ತ ನಾಗರಾಜ್ ಎಂಬುವರು ಸಂಬಂಧಪಟ್ಟ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದರು.
ಈ ದೂರಿನ ಹಿನ್ನೆಲೆಯಲ್ಲಿ ಬುಧವಾರ ಕುಣಿಗಲ್ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಧನಂಜಯ ಗುರೂಜಿ ಅವರ ವಿಚಾರಣೆ ನಡೆಸಿದ್ದಾರೆ. ಧನಂಜಯ ಗುರೂಜಿ ಇರುವ ದೇವಸ್ಥಾನಕ್ಕೆ ಭೇಟಿ ನೀಡಿ ತನಿಖೆ ನಡೆಸಲಾಗಿದೆ. ವಿಚಾರಣೆ ವೇಳೆ ತಾವು ಯಾವುದೇ ಹುಲಿ ಉಗುರು ಧರಿಸಿಲ್ಲ ಎಂದು ಅಧಿಕಾರಿಗಳಿಗೆ ಸ್ವಾಮೀಜಿ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇವರು ದೇವಾಲಯದ ಬಳಿ ಬಸವೇಶ್ವರ ಮಠ ಸ್ಥಾಪಿಸಿ ಗೂರುಜಿಯಾಗಿದ್ದು, ಈ ಹಿಂದೆ ಮೈಮೇಲೆ ಬಂಗಾರದ ಒಡವೆ ಧರಿಸಿಕೊಂಡಿರುವ ಫೋಟೋಗಳು ವೈರಲ್ ಆಗಿದ್ದವು. ಒಡವೆಗಳ ಜೊತೆಗೆ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಫೋಟೋಗಳೂ ಕೂಡ ಇದ್ದವು. ಇತ್ತೀಚೆಗೆ ಹುಲಿ ಉಗುರಿನ ಪೆಂಡೆಂಟ್ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿರುವ ಬೆನ್ನಲ್ಲೇ ಗುರೂಜಿ ವಿರುದ್ಧ ದೂರು ನೀಡಲಾಗಿತ್ತು.
ಇತ್ತೀಚೆಗೆ ಇಂತಹ ಪ್ರಕರಣಗಳು ಹೆಚ್ಚು ಕೇಳಿ ಬರುತ್ತಿದ್ದು ಈ ಬಗ್ಗೆ ಕಲಬುರಗಿಯಲ್ಲಿ ಮಾತನಾಡಿರುವ ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ, ವನ್ಯಜೀವಿ ಸಂರಕ್ಷಣೆ ಕಾಯ್ದೆ ಅಡಿ ವನ್ಯ ಪ್ರಾಣಿಗಳ ಚರ್ಮ, ದಂತ, ಕೊಂಬು ಸಂಗ್ರಹ ಅಥವಾ ಸಾಗಾಣಿಕೆಗೆ ಅವಕಾಶ ಇಲ್ಲ. ಅದು ಶಿಕ್ಷಾರ್ಹ ಅಪರಾಧವಾಗಿದೆ. ಅಂತಹ ಯಾವುದೇ ಪ್ರಕರಣಗಳಲ್ಲಿ ಭಾಗಿಯಾದರೆ, ಅವರ ಹಿಂದೆ ಎಂತಹ ಪ್ರಭಾವಿಗಳಿದ್ದರೂ ಬಿಡುವುದಿಲ್ಲ. ಕಠಿಣ ಕ್ರಮ ಕೈಗೊಳ್ಳಲಾಗುವುದು. ಕೆಲವರು ಹುಲಿ ಉಗುರು ಪದಕಗಳನ್ನು ಕೊರಳಲ್ಲಿ ಧರಿಸುವುದು ಬೆಳಕಿಗೆ ಬಂದಿದೆ. ಇನ್ನೂ ಕೆಲವರು ಹುಲಿ ಚರ್ಮಗಳನ್ನು ಮನೆಗಳಲ್ಲಿ ಶೇಖರಣೆ ಮಾಡುತ್ತಿರುವಂತಹ ದೂರುಗಳು ಬರುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ದೂರಿನ ಅನ್ವಯ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ:ನಾನು ಧರಿಸಿದ್ದ ಹುಲಿ ಉಗುರು ಮಾದರಿಯ ಪೆಂಡೆಂಟ್ ನೈಜವಾದುದ್ದಲ್ಲ: ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ