ತುಮಕೂರು:ರಾಷ್ಟ್ರೀಯ ಹೆದ್ದಾರಿ ರಸ್ತೆಯ ಅಗಲೀಕರಣದ ಹಿನ್ನೆಲೆ ರಸ್ತೆ ಪಕ್ಕದಲ್ಲಿ ಬಸ್ ನಿಲ್ದಾಣಕ್ಕಾಗಿ ಮೀಸಲಿಟ್ಟಿದ್ದ ಸ್ಥಳವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೊರೆ ಹೋಗಿದ್ದಾರೆ.
"ತಾಲೂಕಿನ ಚಿಕ್ಕಳ್ಳಿ ಗ್ರಾಮದಲ್ಲಿ ಈಗಾಗಲೇ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಹಾದು ಹೋಗಿರುವಂತಹ ಜಾಗವನ್ನು ಸಹ ಪ್ರಾಧಿಕಾರದ ವತಿಯಿಂದ ಭೂಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಅಲ್ಲದೇ ಈ ಜಾಗಕ್ಕೆ ಪರಿಹಾರವಾಗಿ ಈಗಾಗಲೇ ಪ್ರಾಧಿಕಾರದ ವತಿಯಿಂದ ಶಿವರುದ್ರಯ್ಯ ಎಂಬುವರಿಗೆ ಪರಿಹಾರದ ಹಣವನ್ನು ಕೂಡ ಬಿಡುಗಡೆ ಮಾಡಲಾಗಿದೆ. ನಂತರ ಈ ಭೂಮಿಯನ್ನು ಬೆಳಗಾವಿ ಮೂಲದ ಶರಣಪ್ಪ ಎಂಬುವರಿಗೆ ಶಿವರುದ್ರಯ್ಯ ಮಾರಾಟ ಮಾಡಿದ್ದಾರೆ. ಅವರು ತಿವಾರಿ ಎಂಬುವರೊಂದಿಗೆ ಜಂಟಿ ವ್ಯವಹಾರದಲ್ಲಿ ಪೆಟ್ರೋಲ್ ಬಂಕ್ ಮಾಡುತ್ತಿದ್ದಾರೆ. ಆದರೆ, ಇದೀಗ ಬಸ್ ನಿಲ್ದಾಣದ ತಂಗುದಾಣದ 2.5 ಗುಂಟೆ ಜಾಗವೂ ಕೂಡ ಇದರಲ್ಲಿ ಸೇರಿದೆ ಎಂಬುದು ಬೆಳಕಿಗೆ ಬಂದಿದೆ. ಇದನ್ನು ಮರೆಮಾಚಿ ಬಸ್ ನಿಲ್ದಾಣದ ಜಾಗವನ್ನು ಶಿವರುದ್ರಯ್ಯ ಮಾರಾಟ ಮಾಡಿದ್ದಾರೆ" ಎಂದು ಸಾಮಾಜಿಕ ಹೋರಾಟಗಾರ ಜಯಣ್ಣ ಆರೋಪಿಸಿದ್ದಾರೆ.
ಬಸ್ ನಿಲ್ದಾಣಕ್ಕೆ ಮೀಸಲಿಟ್ಟಿದ್ದ ಜಾಗವನ್ನೂ ಸೇರಿಸಿಕೊಂಡು ಕನ್ವರ್ಷನ್ಗೆ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದಾರೆ. ಎಲ್ಲಿಯೂ ಕೂಡ ತಂಗುದಾಣದ ಜಾಗವೆಂದು ಗುರುತಿಸಿಲ್ಲ. ರಾಷ್ಟ್ರೀಯ ಹೆದ್ದಾರಿಗಾಗಿ ಭೂಸ್ವಾಧೀನ ಪಡಿಸಿಕೊಳ್ಳುವ ಸಂದರ್ಭದಲ್ಲಿ ಶಿವರುದ್ರಯ್ಯ ಎಂಬುವವರಿಂದ 140 ಸ್ಕ್ವೇರ್ ಮೀಟರ್ ಜಾಗವನ್ನು ಪ್ರಾಧಿಕಾರ ಸ್ವಾಧೀನಕ್ಕೆ ತೆಗೆದುಕೊಂಡಿತ್ತು ಎಂದು ಆರೋಪಿಸಿರುವ ಗ್ರಾಮಸ್ಥರು, ಬಸ್ ನಿಲ್ದಾಣದ ಜಾಗವನ್ನು ಹಿಂದಿರುಗಿಸುವಂತೆ ಜಿಲ್ಲಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಭೂ ಸ್ವಾಧೀನ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.