ತುಮಕೂರು: ಪಾವಗಡ ಸೋಲಾರ್ ಪಾರ್ಕ್ ಏಷ್ಯಾದ 2ನೇ ಅತಿದೊಡ್ಡ ಸೋಲಾರ್ ಪಾರ್ಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು 2050 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ.
ಜಿಲ್ಲೆಯ ಪಾವಗಡ ತಾಲೂಕಿನ ತಿರುಮಣಿ ಬಳಿ ಈ ಪಾರ್ಕ್ ನಿರ್ಮಾಣ ಮಾಡಲಾಗಿದೆ. ತಿರುಮಣಿ ಗ್ರಾಮದ ಸುತ್ತಮುತ್ತಲಿನ ಸುಮಾರು 5 ಗ್ರಾಮದ ರೈತರು ಮತ್ತು ಸ್ಥಳೀಯರು ಸೇರಿ ಒಟ್ಟು 3000 ಕ್ಕಿಂತ ಹೆಚ್ಚು ಜನರು ಅಂದಾಜು 13,000 ಎಕರೆ ಭೂಮಿಯನ್ನು ಕೆ.ಎಸ್.ಪಿ.ಡಿ.ಸಿ.ಎಲ್ ಸಂಸ್ಥೆಗೆ ಗುತ್ತಿಗೆ ರೂಪದಲ್ಲಿ ನೀಡಿದ್ದರು. ಗುತ್ತಿಗೆ ಸಮಯದಲ್ಲಿ ಈ ಸಂಸ್ಥೆಯು ಇಲ್ಲಿ ಜಮೀನು ನೀಡುವ ರೈತರಿಗೆ 8000 ಸಾವಿರ ಉದ್ಯೋಗಗಳನ್ನು ನೀಡುವ ಭರವಸೆ ನೀಡಿತ್ತು. ಅದೀಗ ಹುಸಿಯಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಸೋಲಾರ್ ಪಾರ್ಕ್ ನಿರ್ಮಾಣದ ಸಮಯದಲ್ಲಿ ಕೆಲವು ಕಾಮಗಾರಿಗಳನ್ನು ನೀಡಲಾಗಿತ್ತು. ಈಗ ಆಡಳಿತ ಮತ್ತು ನಿರ್ವಹಣೆ ಕಾಮಗಾರಿಗಳನ್ನು ಸಹ ಸ್ಥಳೀಯರಿಗೆ ನೀಡುತ್ತಿಲ್ಲ. ಕೇವಲ 800 ದಿಂದ 1000 ಜನಕ್ಕೆ ಮಾತ್ರ ಕೆಲಸ ನೀಡಿದ್ದಾರೆ. ಅವು ಸೆಕ್ಯೂರಿಟಿ ಮತ್ತು ಸೋಲಾರ್ ಪಾರ್ಕ್ನಲ್ಲಿ ದಿನಗೂಲಿ ಕೆಲಸಗಳಾಗಿವೆ. ಹಾಗಾಗಿ, 80% ರೈತರು ಮತ್ತು ಸ್ಥಳೀಯರು ವಲಸೆ ಹೋಗುತ್ತಿದ್ದಾರೆ.
ಸ್ಥಳೀಯರಿಗೆ ನೀಡಬೇಕಾದ ಕೆಲಸಗಳು, ಸೆಕ್ಯೂರಿಟಿ ಉದ್ಯೋಗಳು, ಟೆಕ್ನಿಷಿಯನ್, ಅರಣ್ಯ ಉಸ್ತುವಾರಿ, ಹುಲ್ಲು ಕತ್ತರಿಸುವ ಕಾಮಗಾರಿ, ಸೋಲಾರ್ ಮಾಡೆಲ್ ಸ್ವಚ್ಛಗೊಳಿಸುವ ಕೆಲಸ, ಆಡಳಿತ ಮತ್ತು ನಿರ್ವಹಣೆ ಕೆಲಸಗಳು ಸ್ಥಳೀಯರಿಗೆ ನೀಡುವಂತೆ ಸತತ 4 ವರ್ಷದಿಂದ ಕೆಎಸ್ಡಿಸಿಎಲ್ ಸಂಸ್ಥೆಯ ವ್ಯವಸ್ಥಾಪಕರು ಮತ್ತು ಹಲವು ಕಂಪನಿಯವರ ಜೊತೆ ಮಾತನಾಡಿದರೂ ಉಪಯೋಗ ಇಲ್ಲದಂತಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಾವಗಡದಲ್ಲಿನ ಸೋಲಾರ್ ಪಾರ್ಕ್ನಲ್ಲಿ ನೂರಾರು ಕೋಟಿ ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿದ್ದ ಮಾಜಿ ಸಚಿವ ಸೊಗಡು ಶಿವಣ್ಣರ ಹೇಳಿಕೆಗೆ ಇಲ್ಲಿನ ರೈತರು ದನಿಗೂಡಿಸಿದ್ದಾರೆ. ಪಾವಗಡ ತಾಲೂಕಿನ ತಿರುಮಣಿಯಲ್ಲಿ 13 ಸಾವಿರ ಎಕರೆ ಪ್ರದೇಶದಲ್ಲಿ ನಿರ್ಮಾಣವಾದ ಪಾರ್ಕ್ಗೆ ರೈತರಿಂದ ಕಡಿಮೆ ಬಾಡಿಗೆಗೆ ಭೂಮಿ ಪಡೆದು ವಂಚಿಸಿದ್ದಾರೆ ಅನ್ನೋದು ಆಪಾದನೆ.
ಅವ್ಯವಹಾರ ನಡೆಸಿ ರೈತರಿಗೆ ಮೋಸ ಆರೋಪ..
ಪ್ರತಿ ಎಕರೆಗೆ ವರ್ಷಕ್ಕೆ 30 ಸಾವಿರ ರೂ. ಬಾಡಿಗೆ ನಿಗದಿ ಮಾಡಬೇಕಿತ್ತು. ಆದರೆ, ಅಂದಿನ ಇಂಧನ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ತಮಗೆ ಧಮಕಿ ಹಾಕಿ ಎಕರೆಗೆ ಕೇವಲ 21 ಸಾವಿರ ರೂ. ನಿಗದಿ ಮಾಡಿದ್ರು. ಇಲ್ಲಿ ಅದಾನಿ, ಟಾಟಾ ಪವರ್, ರಿಲಿ ಪವರ್ ಸೇರಿದಂತೆ ಹಲವು ಖಾಸಗಿ ಕಂಪನಿಗಳ ಜೊತೆ ಸೇರಿಕೊಂಡು ಅವ್ಯವಹಾರ ನಡೆಸಿ ರೈತರಿಗೆ ಮೋಸ ಮಾಡಿದ್ದಾರೆ ಎಂದು ಭೂಮಿ ಕೊಟ್ಟವರು ಆರೋಪಿಸಿದ್ದಾರೆ.