ಕುಷ್ಟಗಿ(ಕೊಪ್ಪಳ):ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿರುವ ತುಮಕೂರು ಮೂಲದ ಶಿಕ್ಷಣ ಸಂಸ್ಥೆಯ ಹಿರೇಬೇಗೇರಿ ಪ್ರೌಢಶಾಲೆಯೊಂದಕ್ಕೆ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಸಂದರ್ಶನ ನಡೆಸಿರುವುದು ಅನುಮಾನಕ್ಕೆ ಎಡೆಮಾಡಿದೆ. ಸಂದರ್ಶನಕ್ಕೂ ಮೊದಲೇ ಇಂತಹ ಗೊಂದಲ ಸೃಷ್ಟಿಯಾಗಿರುವುದರಿಂದ ನೂರಕ್ಕೂ ಅಧಿಕ ಆಕಾಂಕ್ಷಿಗಳಿಗೆ ನಿರಾಸೆಯಾದ ಪ್ರಕರಣ ಬೆಳಕಿಗೆ ಬಂದಿದೆ.
ಅನುದಾನಿತ ಶಾಲೆ ಸಂದರ್ಶನ ಗೊಂದಲ: ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ನಿರಾಸೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಧ್ರುವ ಸಾರ್ವಜನಿಕ ವಿದ್ಯಾ ಸಂಸ್ಥೆ ಅಡಿಯಲ್ಲಿ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಹಿರೇಬೇಗೇರಿ ಧ್ರುವ ಗ್ರಾಮಾಂತರ ಪ್ರೌಢಶಾಲೆಯ ಶಿಕ್ಷಕ ಹುದ್ದೆಗೆ ಅರ್ಜಿ ಅಹ್ವಾನಿಸಲಾಗಿತ್ತು. ಈ ಅನುದಾನಿತ ಪ್ರೌಢಶಾಲೆಯ 8 ಹುದ್ದೆಗಳಿಗೆ ಪತ್ರಿಕೆಯೊಂದರಲ್ಲಿ 'ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದ ವಿದ್ಯಾಜ್ಯೋತಿ ಹಿರಿಯ ಪ್ರಾಥಮಿಕ ಶಾಲೆ' ಎಂದು ಉಲ್ಲೇಖಿಸಿ ಸಂದರ್ಶನದ ಜಾಹೀರಾತು ಪ್ರಕಟಿಸಲಾಗಿತ್ತು. ಆದರೆ, ಸಂದರ್ಶನದ ಸ್ಥಳ ಏಕಾಏಕಿ ಬದಲಾವಣೆಯಾಗಿದ್ದು ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ.
ಜಾಹೀರಾತು ನಂಬಿದ ರಾಜ್ಯದ ತುಮಕೂರು, ದಾವಣಗೆರೆ, ಕೊಪ್ಪಳ, ರಾಯಚೂರು ಜಿಲ್ಲೆಗಳ ಶಿಕ್ಷಕ ಆಕಾಂಕ್ಷಿಗಳು ಸಂದರ್ಶನಕ್ಕಾಗಿ ಭಾನುವಾರ ಕುಷ್ಟಗಿಗೆ ಆಗಮಿಸಿದ್ದರು. ಈ ವೇಳೆ ಸಂದರ್ಶನಕ್ಕೆ ಸ್ಥಳೀಯ ಬಿಇಓ ಹಾಗೂ ಕೊಪ್ಪಳ ಜಿಲ್ಲೆಯ ಡಿಡಿಪಿಐ ಅನುಮತಿ ಇಲ್ಲ ಎನ್ನುವ ಆರೋಪ ಕೇಳಿಬಂದಿತ್ತು. ಅಲ್ಲದೇ ಸಿಂಧನೂರು ತಾಲೂಕಿನ ಹಿರೆಬೇಗೇರಿ ಗ್ರಾಮದಲ್ಲಿನ ಧ್ರುವ ಪ್ರೌಢಶಾಲೆ ಸಂದರ್ಶನದ ಸ್ಥಳ ಬದಲಾವಣೆಯಿಂದಾಗಿ ಆತಂಕಗೊಂಡ ಆಕಾಂಕ್ಷಿಗಳ ಪ್ರಶ್ನೆಗಳಿಗೆ ಸಂದರ್ಶಕರು ಕಕ್ಕಾಬಿಕ್ಕಿಯಾದರು. ಅವರ ಜೊತೆಯಲ್ಲಿದ್ದ ಸಹವರ್ತಿಗಳು ಗೊಂದಲವೇಳುತ್ತಿದ್ದಂತೆ ಅಲ್ಲಿಂದ ಕಾಲ್ಕಿತ್ತರು. ಆಕಾಂಕ್ಷಿಗಳು ಸಂದರ್ಶನ ಬಹಿಷ್ಕರಿಸಿ, ತಾವು ಪಾವತಿಸಿದ 1 ಸಾವಿರ ರೂಪಾಯಿ ಡಿಡಿ ವಾಪಸ್ ನೀಡಬೇಕೆಂದು ಪಟ್ಟು ಹಿಡಿದಿದ್ದರು.
ವಾಗ್ವಾದ ತೀವ್ರಗೊಳ್ಳುತ್ತಿದ್ದಂತೆ ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಪಿಎಸ್ವೈ ತಿಮ್ಮಣ್ಣ ನಾಯಕ್ ಮಧ್ಯಪ್ರವೇಶಿಸಿ ಇಲ್ಲಿ ಗೊಂದಲ ಗದ್ದಲಗಳಿಗೆ ಅವಕಾಶವಿಲ್ಲ. ಒಂದು ವೇಳೆ ನಡೆದರೆ ಅದಕ್ಕೆ ನೀವೇ ಹೊಣೆಗಾರರು, ಕೂಡಲೇ ಆಕಾಂಕ್ಷಿಗಳ ಡಿಡಿ ಹಣ ವಾಪಸ್ ನೀಡಬೇಕೆಂದು ಸೂಚಿಸಿದರಲ್ಲದೇ ಸಂದರ್ಶನ ಆಯೋಜಿಸಿದ ಸಂಸ್ಥೆಯ ಮೇಲೆ ಅನುಮಾನವಿದ್ದಲ್ಲಿ ದೂರು ಸಲ್ಲಿಸಿ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.