ತುಮಕೂರು: ನಾನು ಸನಾತನ ಧರ್ಮದ ವಿರೋಧಿಯಲ್ಲ. ನಾನು ಧರ್ಮದಲ್ಲಿನ ಅಸಮಾನತೆಯ ವಿರೋಧಿ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಈ ಮೂರೂ ಧರ್ಮದಲ್ಲೂ ಅಸಮಾನತೆ ಇದೆ ಎಂದು ನಟ ಚೇತನ್ ಹೇಳಿದ್ದಾರೆ.
ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತನಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ ಸನಾತನ ಧರ್ಮದ ಬಗ್ಗೆ ಸಚಿವ ಉದಯನಿಧಿ ಸ್ಟಾಲಿನ್ ಅವರು ಯಾವ ವ್ಯಾಪ್ತಿಯಲ್ಲಿ ಹೇಳಿದ್ದಾರೆ ಅನ್ನೋದನ್ನು ನೋಡಬೇಕು ಎಂದು ತಿಳಿಸಿದರು.
''ಪ್ರತಿಯೊಬ್ಬರಿಗೂ ಮಾತನಾಡುವ ಹಕ್ಕಿದೆ. ಮಾತನಾಡಿದವ್ರ ಮೇಲೆ ಎಫ್ ಐ ಆರ್ ಹಾಕಿಸಿ, ಕಪಾಳ ಮೋಕ್ಷ ಮಾಡಿಸಿ ಎಂದೆಲ್ಲಾ ಹೇಳೋದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕಿದೆ. ಸಚಿವ ಉದಯನಿಧಿ ಸ್ಟಾಲಿನ್ ಅವರಿಗೂ ಇದೆ, ನಮ್ಮೆಲ್ಲರಿಗೂ ಇದೆ, ಕಾಂಗ್ರೆಸ್ ಬಿಜೆಪಿಗೂ ಇದೆ. ಯಾರಿಗೇ ಆದರೂ ಯಾವುದೇ ಧರ್ಮವನ್ನು ಆಚರಿಸುವ ಹಕ್ಕಿದೆ. ಅದನ್ನು ಪೂಜಿಸುವ ಹಕ್ಕಿದೆ. ಆದ್ರೆ ಈ ಮೂರು ಧರ್ಮಗಳು ಅಸಮಾನತೆಯ ಸಿದ್ಧಾಂತಗಳು. ಶ್ರೇಣೀಕೃತ ಅಸಮಾನತೆ ಇದೆ. ನಮ್ಮ ದೇಶದಲ್ಲಿ ಧಾರ್ಮಿಕ, ಸಾಂಸ್ಕೃತಿಕ, ವೈವಿಧ್ಯತೆ ಹೆಚ್ಚಾದಷ್ಟು ಒಳ್ಳೆಯದೇ. ಆದ್ರೆ ಸದ್ಯ ಅಸ್ತಿತ್ವದಲ್ಲಿರುವ ಶ್ರೇಣೀಕೃತ ಅಸಮಾನತೆಯನ್ನು ಹೋಗಲಾಡಿಸಬೇಕು'' - ನಟ ಚೇತನ್.
ಏಕರೂಪ ನಾಗರಿಕ ಸಂಹಿತೆಗೆ ನನ್ನ ಸಹಮತ ಇದೆ:ಇನ್ನೂ ಕೇಂದ್ರ ಸರ್ಕಾರ ತರಲು ಹೊರಟಿರುವ ಏಕರೂಪ ನಾಗರಿಕ ಸಂಹಿತೆಗೆ ನನ್ನ ಸಹಮತ ಇದೆ. ಅದು ಸಮ ಸಮಾಜದ ಸಿವಿಲ್ ಕೋಡ್ ಆಗಿರಬೇಕು ಎಂದರು. ಕಮ್ಯೂನಿಸ್ಟರು ಅದನ್ನು ವಿರೋಧಿಸಬಹುದು. ಆದರೆ ಈ ವಿಚಾರದಲ್ಲಿ ನಮ್ಮ ಬೆಂಬಲ ಇದೆ ಎಂದು ನಟ ಚೇತನ್ ತಿಳಿಸಿದರು.