ಘಟನಾ ಸ್ಥಳಕ್ಕೆ ಶಾಸಕ ಟಿ ಬಿ ಜಯಚಂದ್ರ ಹಾಗೂ ಎಸ್ಪಿ ಕೆ ವಿ ಅಶೋಕ್ ಭೇಟಿ ತುಮಕೂರು : ಆಕಸ್ಮಿಕ ಸ್ಫೋಟಗೊಂಡು ಮನೆ ಗೋಡೆ ಕುಸಿದು ಆರು ಮಂದಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ನಗರದ ಮಧುಗಿರಿ ರಸ್ತೆಯ ಪಾರ್ಕ್‌ನಲ್ಲಿ ನಡೆದಿದೆ. ಮೊಹಲ್ಲಾದ ನಜೀರ್ ಎಂಬುವವರ ಮನೆ ಕುಸಿದು ಬಿದ್ದಿದೆ. ಸ್ಫೋಟಕ್ಕೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಸ್ಫೋಟದಲ್ಲಿ ಆರು ಮಂದಿ ಗಾಯಗೊಂಡಿದ್ದು, ಗಂಭೀರ ಗಾಯಗೊಂಡಿದ್ದ ಇಬ್ಬರನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಆಕಸ್ಮಿಕ ಸ್ಪೋಟಕ್ಕೆ ಕುಸಿದು ಬಿದ್ದ ಮನೆ ಗೋಡೆ ಆರಂಭದಲ್ಲಿ ಸಿಲಿಂಡರ್ ಸ್ಫೋಟ ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೆ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಸಿಲಿಂಡರ್ ಸ್ಫೋಟವಲ್ಲ ಎಂಬುದು ತಿಳಿದುಬಂದಿದೆ. ಘಟನೆಗೆ ನಿಖರ ಕಾರಣ ಪತ್ತೆ ಹಚ್ಚಲು ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಶಾಸಕ ಟಿ ಬಿ ಜಯಚಂದ್ರ ಭೇಟಿ ನೀಡಿದ್ದು, ತುಮಕೂರು ಎಸ್ಪಿ ಕೆ ವಿ ಅಶೋಕ್ ಬಳಿ ಮಾಹಿತಿ ಪಡೆದಿದ್ದಾರೆ. ಸ್ಫೋಟದ ಹಿಂದಿರುವ ಕಾರಣವನ್ನು ತಿಳಿಸಲು ಸೂಚಿಸಿದ್ದಾರೆ. ಇತ್ತ ಸ್ಥಳಕ್ಕೆ ಬಾಂಬ್ ನಿಷ್ಕ್ರೀಯ ದಳದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಆಕ್ಸಿಜನ್ ಸಿಲಿಂಡರ್ ಬ್ಲಾಸ್ಟ್: ಜ್ಯೂವೆಲ್ಲರಿ ಶಾಪ್ನಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡು ಅಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ನಗರ್ತಪೇಟೆಯಲ್ಲಿ (ಜೂನ್ -30-2023) ನಡೆದಿತ್ತು. ಮಹಾರಾಷ್ಟ್ರ ಮೂಲದ ವಿಷ್ಣು ಸಾವಂತ್ ಮೃತ ವ್ಯಕ್ತಿ. ಇವರ ಪತ್ನಿ ವೈಜಯಂತಿ ಎಂಬವರಿಗೆ ಸುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಮಧ್ಯಾಹ್ನ ಅವಘಡ ಸಂಭವಿಸಿತ್ತು. ಅಂಬಿಕಾ ರಿಫೈನರಿ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ನರೇಂದ್ರ ಸೋನಿ ಎಂಬವರು ನೀಡಿದ ದೂರಿನ ಮೇರೆಗೆ ಶಾಪ್ ಮಾಲೀಕರಾದ ರಮೇಶ್ ಕೊಠಾರಿ, ಮಹೇಶ್ ಕೊಠಾರಿ, ಕಟ್ಟಡ ಮಾಲೀಕರು ಸೇರಿ ಒಟ್ಟು ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಕಳೆದೊಂದು ವರ್ಷಗಳಿಂದ ನಗರ್ತಪೇಟೆಯ ಅಂಬಿಕಾ ರಿಫೈನರಿ ಶಾಪ್ನಲ್ಲಿ ದಂಪತಿ ಚಿನ್ನಾಭರಣ ಕರಗಿಸುವ ಕೆಲಸ ಮಾಡಿಕೊಂಡು ಬಾಡಿಗೆ ಮನೆವೊಂದರಲ್ಲಿ ವಾಸವಾಗಿದ್ದರು. ನಿನ್ನೆ ಮಧ್ಯಾಹ್ನ ಹೆಂಡತಿ ಊಟದ ಬಾಕ್ಸ್ ತೆಗೆದುಕೊಂಡು ಬಂದಾಗ ಸಿಲಿಂಡರ್ ಸ್ಫೋಟಗೊಂಡಿತ್ತು. ಪರಿಣಾಮ ಪಕ್ಕದಲ್ಲೇ ಇದ್ದ ದಂಪತಿ ಗಂಭೀರ ಗಾಯಗೊಂಡಿದ್ದರು. ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ವಿಷ್ಣು ಸಾವನ್ನಪ್ಪಿದ್ದರು. ಪತ್ನಿಗೆ ಸುಟ್ಟ ಗಾಯವಾಗಿರುವುದರಿಂದ ಚಿಕಿತ್ಸೆ ಪಡೆಯುತ್ತಿರುವುದಾಗಿ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ತಿಳಿಸಿದ್ದರು.
ಇದನ್ನೂ ಓದಿ:ಬೆಂಗಳೂರಿನಲ್ಲಿ ಆಕ್ಸಿಜನ್ ಸಿಲಿಂಡರ್ ಬ್ಲಾಸ್ಟ್: ಪತಿ ಸಾವು, ಪತ್ನಿಗೆ ಗಾಯ