ತುಮಕೂರು: ದಶಕದ ಹಿಂದೆ ಮನೆ ಬಿಟ್ಟು ಹೋಗಿದ್ದ ಮಗ ಕೊರೊನಾ ಭೀತಿಯಿಂದ ವಾಪಸ್ ಬಂದಿದ್ದು, ಆತನನ್ನು ಪೋಷಕರು ಕ್ವಾರಂಟೈನ್ಗೆ ಕಳುಹಿಸಿದ್ದಾರೆ. ಜಿಲ್ಲೆಯ ಕುಣಿಗಲ್ ತಾಲೂಕಿನ ಗುನ್ನಾಗರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಗುನ್ನಾಗರೆ ಗ್ರಾಮದ ಕೃಷ್ಣ ಎಂಬುವರ ಮಗ ರಂಗಸ್ವಾಮಿ 2011ರಿಂದ ಕಣ್ಮರೆಯಾಗಿದ್ದ. ಶಾಲೆಗೆ ಹೋಗಿಬರುವುದಾಗಿ ಹೇಳಿ ವಾಪಸ್ ಮನೆಗೆ ಬಂದಿರಲಿಲ್ಲ. ಆದ್ರೆ, ಮೇ 29ರಂದು ಶುಕ್ರವಾರ ರಾತ್ರಿ ದಿಢೀರನೆ ರಂಗಸ್ವಾಮಿ ತನ್ನ ಅಜ್ಜಿ ಮನೆ ಶೆಟ್ಟಿಗೆರೆ ಗ್ರಾಮದಲ್ಲಿ ಪ್ರತ್ಯಕ್ಷನಾಗಿದ್ದಾನೆ. ಈ ವೇಳೆ ತನ್ನ ಪರಿಚಯವನ್ನು ಗ್ರಾಮಸ್ಥರಿಗೆ ಹೇಳಿಕೊಂಡಿದ್ದಾನೆ. ಗ್ರಾಮಸ್ಥರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪುತ್ರ ಬಂದಿರುವ ಸುದ್ದಿ ಕೇಳಿದ ರಂಗಸ್ವಾಮಿ ಪೋಷಕರು ಗುನ್ನಾಗರೆ ಗ್ರಾಮದಿಂದ ಓಡೋಡಿ ಬಂದಿದ್ದಾರೆ. ಅನೇಕ ವರ್ಷಗಳ ನಂತರ ಮಗನನ್ನು ನೋಡಿ ಸಂತಸಪಟ್ಟಿದ್ದಾರೆ. ಆದ್ರೆ, ಮಗನನ್ನು ಮನೆಗೆ ಸೇರಿಸದೆ ಕೊರೊನಾ ಭೀತಿಯಿಂದ ಕ್ವಾರಂಟೈನ್ಗೆ ಕಳುಹಿಸಿದ್ದಾರೆ.
ಘಟನೆಯ ವಿವರ:
ರಂಗಸ್ವಾಮಿ ಕುಣಿಗಲ್ನ ಜ್ಞಾನ ಭಾರತಿ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. 2011ರ ಜೂ.23ರಂದು ಶಾಲೆಗೆ ಹೋದವನು ಮತ್ತೆ ಮನೆಗೆ ವಾಪಸ್ ಬಂದಿರಲಿಲ್ಲ. ಹಲವು ದಿನಗಳ ಕಾಲ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ನಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಶುಕ್ರವಾರ ಸಂಜೆ ದಿಢೀರ್ ಪ್ರತ್ಯಕ್ಷನಾಗಿದ್ದು, ಬೀದರ್ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾನೆ.
ಈ ನಡುವೆ ಆರೋಗ್ಯ ಇಲಾಖೆ ಸಿಬ್ಬಂದಿ ರಂಗಸ್ವಾಮಿಗೆ ಕುಣಿಗಲ್ ತಾಲೂಕು ಆಸ್ಪತ್ರೆಯಲ್ಲಿ ಸ್ವಾಬ್ ಟೆಸ್ಟ್ ಮಾಡಿಸಿದ್ದಾರೆ. ನಂತರ ರಂಗಸ್ವಾಮಿಯನ್ನು ಹುಲಿಯೂರುದುರ್ಗದ ಹೇಮಗಿರಿ ಬೆಟ್ಟದ ಬಳಿಯ ಸರ್ಕಾರಿ ವಸತಿ ಶಾಲೆಗೆ ಕ್ವಾರಂಟೈನ್ಗೆ ಕರೆದುಕೊಂಡು ಹೋಗಿದ್ದಾರೆ.
ಈ ಕ್ರಮಕ್ಕೆ ತಮ್ಮ ಸಂಪೂರ್ಣ ಸಹಮತವಿದೆ ಎಂದು ಪೋಷಕರಾದ ಕೃಷ್ಣಪ್ಪ ಈಟಿವಿ ಭಾರತಕ್ಕೆ ತಿಳಿಸಿದರು. ಕೃಷ್ಣಪ್ಪ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮೊದಲ ಮಗ ರಂಗಸ್ವಾಮಿ, ಇನ್ನೊಬ್ಬ ಮಗಳು ಸಿವಿಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ.