ತುಮಕೂರು: ಇಂದು ಮುಂಜಾನೆ ಶಿರಾ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಮೃತಪಟ್ಟಿದ್ದಾರೆ. ಕ್ರೂಸರ್ನಲ್ಲಿ ಪ್ರಯಾಣಿಸುತ್ತಿದ್ದ 23 ಮಂದಿ ಕಾರ್ಮಿಕರರೆಲ್ಲರೂ ನಿದ್ರೆಯ ಮಂಪರಿನಲ್ಲಿದ್ದರು. ಈ ಸಂದರ್ಭದಲ್ಲಿ ಲಾರಿ ಡಿಕ್ಕಿ ಹೊಡೆದಿದ್ದು, ಘೋರ ದುರಂತ ಸಂಭವಿಸಿದೆ.
ರಾಯಚೂರು ಜಿಲ್ಲೆಯ ವಿವಿಧ ಗ್ರಾಮಗಳಿಂದ ತುಮಕೂರು ಹಾಗೂ ಬೆಂಗಳೂರಿನಲ್ಲಿ ಕೂಲಿ ಕೆಲಸಕ್ಕೆ ಎಂದು ಇವರೆಲ್ಲರೂ ನಿನ್ನೆ ಸಂಜೆ ತಮ್ಮ ಗ್ರಾಮಗಳಿಂದ ಕ್ರೂಸರ್ನಲ್ಲಿ ಹೊರಟಿದ್ದರು. ಬೆಳಗಿನ ಜಾವ ನಾಲ್ಕು ಮೂವತ್ತರ ಸಂದರ್ಭದಲ್ಲಿ ಎಲ್ಲರೂ ಸಂಪೂರ್ಣ ನಿದ್ರೆ ಜಾರಿದ್ದರು. ಈ ವೇಳೆ ಯಮನಂತೆ ಬಂದು ಲಾರಿ ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ:ದುಡಿಯಲು ಹೋಗುತ್ತಿದ್ದವರ ಕ್ರೂಸರ್ಗೆ ಲಾರಿ ಡಿಕ್ಕಿಯಾಗಿ 9 ಜನ ದುರ್ಮರಣ.. ಅಪಘಾತದ ಭೀಕರತೆ ಬಿಚ್ಚಿಟ್ಟ ಗಾಯಾಳು
'ಅಪಘಾತ ನಡೆದಾಗ ತೀವ್ರ ಗಾಯಗೊಂಡು ನರಳಾಡುತ್ತಿದ್ದ ವೇಳೆ ಪಾರು ಮಾಡುವಂತೆ ಜೋರಾಗಿ ಕೂಗುತ್ತಿದ್ದೆವು. ಸ್ಥಳದಲ್ಲಿ ಯಾರು ಇರಲಿಲ್ಲ, ನಂತರ ಪೊಲೀಸರು ಬಂದು ನಮ್ಮನ್ನು ಆಸ್ಪತ್ರೆಗೆ ದಾಖಲು ಮಾಡಿದರು' ಎಂದು ಗಾಯಾಳು ಒಬ್ಬರು ತಿಳಿಸಿದ್ದಾರೆ.
ಮೃತಪಟ್ಟವರನ್ನು ಸುಜಾತ, ಲಕ್ಷ್ಮಿ, ವಿನೋದ, ಪ್ರಭು, ಕೃಷ್ಣಪ್ಪ, ಬಸಮ್ಮ ಎಂದು ಗುರುತಿಸಲಾಗಿದೆ. ಇನ್ನುಳಿದವರ ಹೆಸರನ್ನು ಪತ್ತೆಹಚ್ಚಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡ 12 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ:ಶಿರಾ ಬಳಿ ಲಾರಿ ಮತ್ತು ಕ್ರೂಸರ್ ನಡುವೆ ಡಿಕ್ಕಿ.. 9 ಮಂದಿ ದುರ್ಮರಣ
ಪರಿಹಾರ ಘೋಷಿಸಿದ ನರೇಂದ್ರ ಮೋದಿ: ತುಮಕೂರಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, ಕರ್ನಾಟಕದ ತುಮಕೂರಲ್ಲಿ ನಡೆದ ರಸ್ತೆ ಅಪಘಾತವು ಹೃದಯ ವಿದ್ರಾವಕವಾಗಿದೆ. ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸುತ್ತೇನೆ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಮೃತರ ಕುಟುಂಬಕ್ಕೆ ಪಿಎಂಎನ್ಆರ್ಎಫ್ ಅಡಿಯಲ್ಲಿ ತಲಾ 2 ಲಕ್ಷ ರೂಪಾಯಿ ಪರಿಹಾರ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ನೀಡೋದಾಗಿ ಘೋಷಣೆ ಮಾಡಿದ್ದಾರೆ.