ತುಮಕೂರು: ಕಾಲು ಜಾರಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗುತ್ತಿದ್ದ ಸಹೋದರನನ್ನು 8 ವರ್ಷದ ಬಾಲಕಿ ಪ್ರಾಣದ ಹಂಗು ತೊರೆದು ರಕ್ಷಣೆ ಮಾಡಿರುವ ಘಟನೆ ತುಮಕೂರು ತಾಲೂಕಿನ ಕುಚ್ಚಂಗಿಯಲ್ಲಿ ನಡೆದಿದೆ. ತೋಟದ ಮನೆಯಲ್ಲಿ ಕೆಲಸಕ್ಕೆ ಇದ್ದ ಉತ್ತರ ಪ್ರದೇಶ ಮೂಲದ ಜೀತೇಂದ್ರ, ರಾಜಕುಮಾರಿ ದಂಪತಿಯ 7 ವರ್ಷದ ಪುತ್ರ ಹಿಮಾಂಶೂ ಬಾವಿಗೆ ಬಿದ್ದಿದ್ದ. ಈತನನ್ನು ಅಕ್ಕ ಶಾಲೂ ರಕ್ಷಣೆ ಮಾಡಿದ್ದಾಳೆ.
ಜೀತೇಂದ್ರ - ರಾಜಕುಮಾರಿ ದಂಪತಿಗೆ ನಾಲ್ವರು ಮಕ್ಕಳು. ಶಾಲೂ (8), ಹಿಮಾಂಶೂ (7), ರಾಶಿ (3), ಕಪಿಲ್ (2) ತೋಟದಲ್ಲಿ ಆಟವಾಡುತ್ತಿದ್ದರು. ಈ ವೇಳೆ ಬಾಲ್ ತೆಗೆಯಲು ಹೋದ ಹಿಮಾಂಶೂ ಮಗುಚಿ ಬಾವಿಗೆ ಬಿದ್ದಿದ್ದಾನೆ. ಬಾವಿಯಲ್ಲಿ ಬಿದ್ದು ಒದ್ದಾಡುತ್ತಿದ್ದ ತಮ್ಮನನ್ನು ಕಂಡ ಶಾಲೂ ಕೂಡಲ್ಲೇ ಮನೆಯಲ್ಲಿದ್ದ ಲೈಫ್ ಜಾಕೆಟ್ ಧರಿಸಿ ಬಾವಿಗೆ ಹಾರಿದ್ದಾಳೆ. ಇದೇ ವೇಳೆ ಅಕ್ಕ ಪಕ್ಕದ ಜನರು ಸಹ ಬಾಲಕಿಯ ಸಹಾಯಕ್ಕೆ ಬಂದಿದ್ದಾರೆ. ಇದರಿಂದಾಗಿ ಬಾಲಕಿಯ ತಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕಳೆದ ಮೂರ್ನಾಲ್ಕು ತಿಂಗಳಿಂದ ಬಾಡಿಗೆ ಮನೆ ಮಾಲೀಕ ಧನಂಜಯ್ಯ ಬಳಿ ಶಾಲೂ ಈಜು ಕಲಿಯುತ್ತಿದ್ದಳು. ಹೀಗಾಗಿ, ಲೈಫ್ ಜಾಕೆಟ್ ಧರಿಸಿ ಈಜುವುದನ್ನು ಕಲಿತ್ತಿದ್ದಳು. ಬಾಲಕಿಯ ಸಾಹಸವನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ.