ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತುಮಕೂರು ವಿಭಾಗಕ್ಕೆ ಕೋವಿಡ್ ಲಾಕ್‌ಡೌನ್ ವೇಳೆ ಸುಮಾರು 40 ಕೋಟಿ ರೂ. ನಷ್ಟ ಸಂಭವಿಸಿದೆ. ಬಸ್ ಸಂಚಾರವಿಲ್ಲದ ಕಾರಣ ಪ್ರತಿನಿತ್ಯ ಸುಮಾರು 65 ಲಕ್ಷ ರೂ. ನಷ್ಟದಿಂದ ವಿಭಾಗ ಸೊರಗುವಂತಾಗಿತ್ತು ಎಂದು ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ್ ತಿಳಿಸಿದ್ದಾರೆ.
ಕೆಎಸ್ಆರ್ಟಿಸಿ ತುಮಕೂರು ವಿಭಾಗಕ್ಕೆ 40 ಕೋಟಿ ರೂ.ನಷ್ಟ: ವಿಭಾಗೀಯ ನಿಯಂತ್ರಣಾಧಿಕಾರಿ - ksrtc Tumkur division
ಕೋವಿಡ್ ಲಾಕ್‌ಡೌನ್ ವೇಳೆ ಕೆಎಸ್ಆರ್ಟಿಸಿ ತುಮಕೂರು ವಿಭಾಗಕ್ಕೆ ಭಾರಿ ನಷ್ಟ ಉಂಟಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಲಾಕ್‌ಡೌನ್ ತೆರವಾಗಿದ್ದರೂ ಬಸ್ ಸಂಚಾರ ಪೂರ್ಣ ಪ್ರಮಾಣದಲ್ಲಿ ಆಗುತ್ತಿಲ್ಲ. ಜನರು ಇನ್ನೂ ಕೂಡ ಮುಕ್ತವಾಗಿ ಬಸ್ಗಳಲ್ಲಿ ಓಡಾಡಲು ಮುಂದಾಗುತ್ತಿಲ್ಲ. ಹೀಗಾಗಿ ಜಿಲ್ಲೆಯ ಎಲ್ಲಾ ಡಿಪೋಗಳು ಸೇರಿದಂತೆ ಸಾಮಾನ್ಯ ದಿನಗಳಲ್ಲಿ ಪ್ರತಿದಿನ 580 ಬಸ್‌ಗಳು ಸಂಚರಿಸುತ್ತಿದ್ದವು. ಲಾಕ್‌ಡೌನ್ ತೆರವುಗೊಂಡ ಮೊದಲ ದಿನ ಸೋಮವಾರ (ಜೂ.21) ಕೇವಲ 261 ಬಸ್‌ಗಳು ರಸ್ತೆಗಿಳಿದಿದ್ದವು. ಆದರೆ ಮಂಗಳವಾರ, ಬುಧವಾರ ಅರ್ಧದಷ್ಟು ಬಸ್‌ಗಳು ಕೂಡಾ ಸಂಚರಿಸಿಲ್ಲ. ಹೀಗಾಗಿ ಪೂರ್ಣ ಪ್ರಮಾಣದಲ್ಲಿ ಆದಾಯ ಬರುತ್ತಿಲ್ಲ ಎಂದು ತಿಳಿಸಿದರು.
ಜಿಲ್ಲಾ ಕೇಂದ್ರದಿಂದ ತಾಲೂಕುಗಳಿಗೆ, ಬೆಂಗಳೂರು, ಅಲ್ಲದೆ ಗ್ರಾಮೀಣ ಭಾಗದಲ್ಲಿ ಬಸ್‌ಗಳು ಸಂಚರಿಸಿವೆ. ಬೇಡಿಕೆ ಆಧರಿಸಿ ಬಸ್ ಸಂಚಾರವನ್ನು ಪ್ರಾರಂಭಿಸಲಾಗುತ್ತಿದೆ. ಆದ್ರೆ ಬೇಡಿಕೆ ಇಲ್ಲದೆ ಬಸ್‌ಗಳು ಸಂಚರಿಸಿದರೆ ಸಂಸ್ಥೆ ನಷ್ಟ ಅನುಭವಿಸುವಂತಾಗುತ್ತದೆ. ಅಗತ್ಯ ಇರುವ ಮಾರ್ಗಗಳಲ್ಲಿ ಮಾತ್ರ ಬಸ್ ಸಂಚಾರ ಆರಂಭಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.