ತುಮಕೂರು: ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ ಸೇರಿ 20 ಮಂದಿಯಲ್ಲಿ ಕೊರೊನಾ ವೈರಸ್ ದೃಢಪಟ್ಟಿದ್ದು, ಓರ್ವ ಸೋಂಕಿನಿಂದ ಮೃತರಾಗಿದ್ದಾರೆ.
ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 113ಕ್ಕೆ ಏರಿಕೆಯಾಗಿದ್ದು, ಆರು ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೂ 39 ಮಂದಿ ಗುಣಮುಖರಾಗಿದ್ದು, 68 ಮಂದಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜೂನ್ 26ರಂದು ಅಪಘಾತಕ್ಕೆ ಒಳಗಾಗಿದ್ದು ವ್ಯಕ್ತಿಯೊಬ್ಬ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಗಂಟಲು ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿ ಬರುವ ಮುನ್ನವೇ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ವರದಿಯಲ್ಲಿ ಅವರಿಗೆ ಸೋಂಕು ಇರುವುದು ದೃಢವಾಗಿತ್ತು. ಈ ಬಳಿಕ ಮತ್ತೊಂದು ಸಾವು ಸಂಭವಿಸಿದೆ.
ಈಟಿವಿ ಭಾರತ ಜತೆ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗೇಂದ್ರಪ್ಪ ಕುಣಿಗಲ್ ತಾಲೂಕಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಯೊಬ್ಬನಿಗೆ ಸೋಂಕು ತಗಲಿದೆ. ಆತನಿಗೆ ಮುಂದಿನ ಪರೀಕ್ಷೆಗಳು ಬರೆಯಲು ಅವಕಾಶ ನಿರಾಕರಿಸಲಾಗಿದ್ದು, ಸಪ್ಲಿಮೆಂಟರಿಗೆ ಅವಕಾಶ ನೀಡಲಾಗುವುದು. ಈತನೊಂದಿಗೆ ಪರೀಕ್ಷೆ ಬರೆದ 18 ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗೇಂದ್ರಪ್ಪ ತಿಳಿಸಿದ್ದಾರೆ.
ಶಿರಾ ತಾಲೂಕಿನಲ್ಲಿ ವ್ಯಕ್ತಿಯೊಬ್ಬರು ಜ್ವರದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ ಆಸ್ಪತ್ರೆಯ ವೈದ್ಯರು ಮತ್ತು ದಾದಿಯರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದರು.