ತುಮಕೂರು: ಪೋಷಕರಿದ್ದರೂ ಕೂಡ ಜತೆಗಿರದೆ ನೊಂದಿದ್ದ ಇಬ್ಬರು ಮಕ್ಕಳ ನೆರವಿಗೆ ಜಿಲ್ಲಾ ಮಕ್ಕಳ ಹಕ್ಕು ರಕ್ಷಣಾ ಇಲಾಖೆ ಬಂದಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸಿದ್ದಾರೆ.
8 ವರ್ಷದ ಹಿಂದೆ ತಂದೆ ಮನೆ ಬಿಟ್ಟು ಓಡಿ ಹೋಗಿದ್ದ. ಇಬ್ಬರು ಮಕ್ಕಳನ್ನು ಸಾಕುತ್ತಾ ಸಂಸಾರ ನಡೆಸುತ್ತಿದ್ದ ತಾಯಿ ಕೂಡ ಕಣ್ಮರೆಯಾಗಿದ್ದಳು. ಹೀಗೆ ಪೋಷಕರೇ ಮಕ್ಕಳನ್ನು ಬಿಟ್ಟು ಹೋಗಿದ್ದು, ಮಕ್ಕಳು ಕಂಗಾಲಾಗಿ ಅನಾಥ ಪ್ರಜ್ಞೆಯಿಂದ ದಿನ ದೂಡುತ್ತಿದ್ದರು. ಸಾರ್ವಜನಿಕರು ವಿಷಯ ತಿಳಿದು ಮಕ್ಕಳ ಹಕ್ಕು ರಕ್ಷಣಾ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಇಲಾಖೆ ಅಧಿಕಾರಿಗಳು ಮಕ್ಕಳನ್ನು ರಕ್ಷಿಸಿದ್ದಾರೆ.
ಮಕ್ಕಳ ಹಕ್ಕು ಸಂರಕ್ಷಣಾಧಿಕಾರಿ ಪ್ರತಿಕ್ರಿಯೆ ತುಮಕೂರು ನಗರದ ದೇವನೂರು ಚರ್ಚ್ ಪ್ರದೇಶದ ಬಳಿ ಈ ಘಟನೆ ನಡೆದಿದೆ. 8 ವರ್ಷದ ಹಿಂದೆ ಅರುಣ್ ಕುಮಾರ್ ಎಂಬಾತ ಹೆಂಡತಿ, ಇಬ್ಬರು ಮಕ್ಕಳನ್ನು ಬಿಟ್ಟು ಓಡಿ ಹೋಗಿದ್ದಾನೆ. 8 ವರ್ಷಗಳ ಕಾಲ ಮಕ್ಕಳನ್ನು ಕೂಲಿ ಮಾಡಿ ತಾಯಿ ಕಾವೇರಿ ಸಾಕಿದ್ದಾಳೆ. ಆದ್ರೆ ಮೂರು ತಿಂಗಳ ಹಿಂದೆ ತಾಯಿ ಕಾವೇರಿ ಕೂಡ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ ಎನ್ನಲಾಗಿದೆ. ಇದ್ರಿಂದ 14 ವರ್ಷ ಹಾಗೂ 7 ವರ್ಷ ವಯಸ್ಸಿನ ಸಹೋದರಿಬ್ಬರು ಬೀದಿಗೆ ಬಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮಕ್ಕಳನ್ನು ಅನಾಥವಾಗಿಸುವುದಷ್ಟೇ ಅಲ್ಲದೆ, ಮಹಿಳಾ ಸಂಘದಲ್ಲಿ ಆ ಮಹಾತಾಯಿ ಹಣ ಪಡೆದು, ಆ ಸಾಲದ ಹೊರೆಯನ್ನು ಮಕ್ಕಳ ತಲೆಗೆ ಮೇಲೆ ಹೊರಿಸಿ ಓಡಿ ಹೋಗಿದ್ದಾಳೆ. ತಾಯಿ ಮಾಡಿದ ಸಾಲ ತೀರಿಸಲು, ತಮ್ಮನ ಭವಿಷ್ಯ ರೂಪಿಸಲು, ಜತೆಗೆ ಜೀವನ ನಡೆಸಲು 14 ವರ್ಷದ ಅಣ್ಣ ಗಾರೆ ಕೆಲಸಕ್ಕೆ ಹೋಗಿ ದುಡಿಯುತ್ತಿದ್ದ. ಮನೆಯಲ್ಲಿ ತಾವೇ ಅಡುಗೆ ಮಾಡಿಕೊಂಡು, ತಮ್ಮ ಶಾಲೆಗೆ ಹೋಗುತ್ತಾ, ಅಣ್ಣ ಕೂಲಿ ಮಾಡುತ್ತಾ ಬಾಲಕರು ಜೀವನ ನಡೆಸುತ್ತಿದ್ದರು. ಆದ್ರೆ ಇವರ ಗಾಯಕ್ಕೆ ಕೊರೊನಾ ಬರೆ ಎಳೆದಿದೆ. ಲಾಕ್ಡೌನ್ನಿಂದ ಕೂಲಿ ಕೆಲಸಕ್ಕೂ ಬ್ರೇಕ್ ಬಿದ್ದಿದೆ. ಹೀಗಾಗಿ ಇಬ್ಬರು ಮಕ್ಕಳು ಊಟಕ್ಕಾಗಿ ಮನೆ ಮನೆ ಅಲೆಯುವ ಪರಿಸ್ಥಿತಿ ಎದುರಾಗಿತ್ತು.
ಇದನ್ನೂ ಓದಿ:ನೌಕಾನೆಲೆ ಪಾಸ್ ಹಿಡಿದು ನಿತ್ಯ ಓಡಾಡುವ ಸಿಬ್ಬಂದಿ: ನಿಯಂತ್ರಿಸುವುದೇ ಪೊಲೀಸರಿಗೆ ದೊಡ್ಡ ಸವಾಲು
ಮಕ್ಕಳ ಪರಿಸ್ಥಿತಿಗೆ ಸ್ಥಳೀಯರು ಕನಿಕರ ತೋರಿಸಿ ಅವರಿಗೆ ತಿಂಡಿ, ಊಟ ನೀಡಿದ್ದಾರೆ. ಇದಾದ ಕೆಲ ದಿನಗಳು ಕಳೆದ ಬಳಿಕ ತಹಶೀಲ್ದಾರ್ ಹಾಗೂ ಮಕ್ಕಳ ರಕ್ಷಣಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಮಕ್ಕಳ ರಕ್ಷಣಾ ಅಧಿಕಾರಿಗಳು ಇಬ್ಬರು ಮಕ್ಕಳನ್ನು ಬಾಲ ರಕ್ಷಣಾ ಮಂದಿರಕ್ಕೆ ಕರೆ ತಂದು ಸಾಂತ್ವನ ಹೇಳಿ ರಕ್ಷಣೆ ನೀಡಿದ್ದಾರೆ. ಬಾಲಕರಿಗೆ ಸರ್ಕಾರಿ ಬಾಲಕರ ಬಾಲ ಮಂದಿರದಲ್ಲಿ ವಸತಿ ಕಲ್ಪಿಸಲಾಗಿದೆ.