ಕರ್ನಾಟಕ

karnataka

ETV Bharat / state

ಸ್ಫೋಟಕ ಇದ್ದ ಬೆದರಿಕೆ ಪತ್ರ ಪೋಸ್ಟ್ ಪ್ರಕರಣ: ತುಮಕೂರಿನ ಇಬ್ಬರು ಸಿಸಿಬಿ ವಶಕ್ಕೆ - arrested in Explosive threat letter post case

ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಸೇಡು ತೀರಿಸಿಕೊಳ್ಳಲು ಆರೋಪಿ ರಾಜಶೇಖರಯ್ಯ ಬಾಂಬ್ ಬೆದರಿಕೆ ಪತ್ರವನ್ನು ಕಳುಹಿಸಿದ್ದು ಆರೋಪಿಗಳ ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಾಥಮಿಕ ತನಿಖೆ ವೇಳೆ‌ ತಿಪಟೂರು ಮೂಲದ ರಾಜಶೇಖರಯ್ಯ ಹಾಗೂ ಗುಬ್ಬಿ ತಾಲೂಕು ಹಾಗಲವಾಡಿ ಮೂಲದ ವೇದಾಂತ್ ಎಂಬುವರನ್ನ ವಶಕ್ಕೆ ಪಡೆದಿದ್ದಾರೆ.

ಸ್ಫೋಟಕ ಇದ್ದ ಬೆದರಿಕೆ ಪತ್ರ ಪೋಸ್ಟ್ ಪ್ರಕರಣ
ಸ್ಫೋಟಕ ಇದ್ದ ಬೆದರಿಕೆ ಪತ್ರ ಪೋಸ್ಟ್ ಪ್ರಕರಣ

By

Published : Oct 20, 2020, 1:15 PM IST

ತುಮಕೂರು/ಬೆಂಗಳೂರು: ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರಿಗೆ ಡಿಟೋನೇಟರ್ ಪೋಸ್ಟ್ ಮಾಡಿ ಬೆದರಿಕೆ ಪತ್ರ ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಾಥಮಿಕ ತನಿಖೆ ವೇಳೆ‌ ತಿಪಟೂರು ಮೂಲದ ರಾಜಶೇಖರಯ್ಯ ಹಾಗೂ ಗುಬ್ಬಿ ತಾಲೂಕು ಹಾಗಲವಾಡಿ ಮೂಲದ ವೇದಾಂತ್ ಎಂಬುವರನ್ನ ವಶಕ್ಕೆ ಪಡೆದಿದ್ದಾರೆ.

ಕೌಟುಂಬಿಕ ಕಲಹದ ದ್ವೇಷದ ಕಾರಣದಿಂದ ಬಾಂಬ್ ಬೆದರಿಕೆ ಹಾಕಿರುವುದು ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ. ರಾಜಶೇಖರಯ್ಯ ಹಾಗೂ ರಮೇಶ್ ಇಬ್ಬರು ಒಂದೇ ಕುಟುಂಬದಲ್ಲಿ ಮದುವೆಯಾಗಿದ್ದರು. ಹೀಗಾಗಿ ಇಬ್ಬರಿಗೂ ಆಸ್ತಿ ಸಂಬಂಧ ದ್ವೇಷ ಉಂಟಾಗಿತ್ತು. ಹೀಗಾಗಿ ರಮೇಶ್​ಗೆ ತೊಂದರೆ ಕೊಡಲು ರಾಜಶೇಖರಯ್ಯ ಪ್ಲಾನ್ ಮಾಡಿ ವೇದಾಂತ್ ಎಂಬುವನ ಕೈಯಲ್ಲಿ ಪತ್ರ ಬರೆಸಿದ್ದಾನಂತೆ.

ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಸೇಡು ತೀರಿಸಿಕೊಳ್ಳಲು ಆರೋಪಿ ರಾಜಶೇಖರಯ್ಯನು ರಮೇಶ ಹೆಸರಿನಲ್ಲಿ ಬಾಂಬ್ ಬೆದರಿಕೆ ಪತ್ರವನ್ನು ಕಳುಹಿಸಿರುವುದು ಆರೋಪಿಗಳ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಆರೋಪಿ ರಾಜಶೇಖರಯ್ಯನ ಪತ್ನಿಯ ತಂದೆಗೆ ಇಬ್ಬರು ಹೆಂಡತಿಯರು ಇರುತ್ತಾರೆ. ಮೊದಲ ಪತ್ನಿಯ ಮಗಳನ್ನು ರಾಜಶೇಖರಯ್ಯ ಮದುವೆಯಾಗಿರುತ್ತಾನೆ. ಮಾವನ ಬಳಿ ಇದ್ದ ಅಪಾರ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟಿರುತ್ತಾರೆ. ಇನ್ನೊಂದೆಡೆ ರಾಜಶೇಖರಯ್ಯ ಮಾವ ಎರಡನೇ ಪತ್ನಿಯ ಮಗಳನ್ನು ಚೇಳೂರಿನ ರಮೇಶ ಎಂಬಾತನಿಗೆ ಮದುವೆ ಮಾಡಿಕೊಡಲು ಪ್ರಯತ್ನ ಪಟ್ಟಿರುತ್ತಾರೆ. ಇದಕ್ಕೆ ರಾಜಶೇಖರಯ್ಯ ಹಲವು ಬಾರಿ ಅಡ್ಡಗಾಲು ಹಾಕಿರುತ್ತಾನೆ. ಅಲ್ಲದೆ 2019 ರಲ್ಲಿ ಮೇ ತಿಂಗಳಲ್ಲಿ ರಾಜಶೇಖರನ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿರುತ್ತದೆ.

ನಂತರ ಮಗಳನ್ನು ರಮೇಶನಿಗೆ ಮದುವೆ ಮಾಡಿಕೊಡಲಾಗುತ್ತದೆ. ಅಲ್ಲದೆ ಆತನ ಮಾವ ತನ್ನೆಲ್ಲ ಆಸ್ತಿಯನ್ನು ಎರಡನೇ ಅಳಿಯ ರಮೇಶನ ಹೆಸರಿಗೆ ಬರೆದಿರುತ್ತಾನೆ. ಇದರಿಂದ ತೀವ್ರ ಕಸಿವಿಸಿಗೊಂಡು ಸೇಡು ತೀರಿಸಿಕೊಳ್ಳಲು ಮುಂದಾದ ರಾಜಶೇಖರಯ್ಯ ರಮೇಶನನ್ನು ಅಪರಾಧ ಪ್ರಕರಣದಲ್ಲಿ ಸಿಲುಕಿಸುವ ಹುನ್ನಾರ ನಡೆಸಿರುತ್ತಾನೆ.

ಹೀಗಾಗಿ ರಮೇಶ ವಾಸಿಸುತ್ತಿದ್ದ ಚೇಳೂರಿನಿಂದ, ರಮೇಶನ ಆಧಾರ್ ಕಾರ್ಡ್ ಮತ್ತು ಬೆದರಿಕೆ ಪತ್ರವನ್ನು ನ್ಯಾಯಾಧೀಶರಿಗೆ ಕಳುಹಿಸಿರುತ್ತಾನೆ. ಈ ಮೂಲಕ ರಮೇಶನನ್ನು ಸಿಲುಕಿಸುವ ಪ್ರಯತ್ನದಲ್ಲಿ ರಾಜಶೇಖರಯ್ಯ ಯೋಜನೆ ರೂಪಿಸಿದ್ದ ಎಂದು ಹೇಳಲಾಗ್ತಿದೆ.

ಬೆಂಗಳೂರಿನಿಂದ ಬಂದಿದ್ದ ಸಿಸಿಬಿ ಪೊಲೀಸರು ಮೊದಲಿಗೆ ರಮೇಶನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ರಮೇಶನ ಪೂರ್ವಾಪರ ವಿಚಾರಿಸಿದಾಗ ರಾಜಶೇಖರಯ್ಯ ತನ್ನ ಮೇಲೆ ಸೇಡು ತೀರಿಸಿಕೊಳ್ಳುವ ಹುನ್ನಾರ ನಡೆಸಿರುವುದು ಬೆಳಕಿಗೆ ಬರುತ್ತದೆ. ತಕ್ಷಣ ರಾಜಶೇಖರಯ್ಯನನ್ನು ವಶಕ್ಕೆ ಪಡೆದ ಸಿಸಿಬಿ ಪೊಲೀಸರು ಸಿಸಿಟಿವಿ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ರಾಜಶೇಖರ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

For All Latest Updates

TAGGED:

ABOUT THE AUTHOR

...view details