ಬೆಂಗಳೂರು: ಧ್ವನಿ ಮತದ ಮೂಲಕ ವಿಶ್ವಾಸಮತಕ್ಕೆ ಅವಕಾಶ ಮಾಡಿಕೊಡುವುದಾಗಿ ಸಿಎಂ ಯಡಿಯೂರಪ್ಪನವರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಗ್ರಂಥಾಲಯ ಇಲಾಖೆಯ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂದರ್ಭ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಜೊತೆ ಮಾತನಾಡಿದ ಸ್ಪೀಕರ್, ಧ್ವನಿ ಮತದ ಮೂಲಕವೇ ವಿಶ್ವಾಸಮತ ಮುಗಿಸುವುದಾಗಿ ತಿಳಿಸಿದ್ದಾರೆ.
ಪ್ರತಿಪಕ್ಷ ಕಾಂಗ್ರೆಸ್, ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿರುವ ಹಿನ್ನೆಲೆ ಇಂದು ಸರ್ಕಾರ ವಿಶ್ವಾಸಮತದ ಸವಾಲು ಎದುರಿಸಬೇಕಾಗಿದೆ. ವಿಶ್ವಾಸಮತ ಯಾಚನೆಗೂ ಮೊದಲೇ ಸಿಎಂಗೆ ಸ್ಪೀಕರ್ ಈ ಮಾಹಿತಿ ನೀಡಿದ್ದಾರೆ.
ವಿವಾದಕ್ಕೆ ಆಸ್ಪದ:
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಸಿಎಂ ಬಿ.ಎಸ್. ಯಡಿಯೂರಪ್ಪ ನಡುವಿನ ಈ ಸಂಭಾಷಣೆ ದೊಡ್ಡ ವಿವಾದಕ್ಕೆ ಆಸ್ಪದ ಮಾಡಿಕೊಟ್ಟಿದೆ. ಸಿಎಂ ಮತ್ತು ಸ್ಪೀಕರ್ ಪರಸ್ಪರ ಮಾತನಾಡಿಕೊಂಡಿರುವುದರ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಸಿಕ್ಕಿದ್ದು, ಚರ್ಚೆಗೆ ಆಸ್ಪದ ನೀಡಿದಂತಾಗಿದೆ.
ಸಂಭಾಷಣೆ ಹೇಗಿದೆ?:
ವಿರೋಧ ಪಕ್ಷದ ನಾಯಕರು ಧ್ವನಿ ಮತ ಹಾಕಲು ಒಪ್ಪಿಕೊಂಡಿದ್ದಾರೆ. ಈ ಕುರಿತು ನಿನ್ನೆ ಮತ್ತು ಇಂದೂ ಕೂಡ ಕೇಳಿದೆ. ಇದಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ಸ್ಪೀಕರ್ ಮುಖ್ಯಮಂತ್ರಿಗೆ ಮಾಹಿತಿ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಸ್ಪೀಕರ್ ಮಾತಿಗೆ ಹೌದಾ ಎಂದು ತಲೆಯಾಡಿಸಿ ಫೋನ್ ಕಟ್ ಮಾಡಿದ್ದಾರೆ ಎನ್ನಲಾಗಿದೆ.
ಈ ಮೂಲಕ ಮತ್ತೊಮ್ಮೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಮುಂದಿನ ಆರು ತಿಂಗಳು ಸುಭದ್ರವಾಗಿ ಉಳಿಯಲಿದೆ ಎಂಬ ಮಾಹಿತಿ ದೊರಕಿದೆ.