ಬೆಂಗಳೂರು:ನೆರೆ ಪರಿಹಾರ ವಿಳಂಬ ಸಂಬಂಧ ಬಹಿರಂಗವಾಗಿ ಪಕ್ಷದ ನಾಯಕರ ವಿರುದ್ಧ ಹೇಳಿಕೆ ನೀಡಿದ್ದ ಆರೋಪ ಸಂಬಂಧ ಬಿಜೆಪಿ ನೀಡಿದ್ದ ಶೋಕಾಸ್ ನೋಟಿಸ್ಗೆ ಉತ್ತರ ನೀಡುವ ಬದಲು ವರಿಷ್ಠರ ನೇರ ಭೇಟಿಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಂದಾಗಿದ್ದಾರೆ.
ನೇರ ಭೇಟಿಗೆ ಸಮಯ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ ಪಿ ನಡ್ಡಾಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪತ್ರ ಬರೆದಿದ್ದಾರೆ.
ಬಿಜೆಪಿ ನಾಯಕರಿಗೆ ಯತ್ನಾಳ್ ಪತ್ರ ಉತ್ತರ ಕರ್ನಾಟಕದ ನೆರೆ ಪರಿಸ್ಥಿತಿ ವಿವರಿಸಲು ಮುಖಾಮುಖಿ ಭೇಟಿಗೆ ಸಮಯಾವಕಾಶ ನೀಡುವಂತೆ ಮೂವರು ನಾಯಕರಿಗೂ ಅಕ್ಟೋಬರ್ 5ರಂದು ಪತ್ರ ಬರೆದಿದ್ದು, ನೆರೆ ಪರಿಹಾರ ಸಂಬಂಧ ತನ್ನ ಹೇಳಿಕೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿಲ್ಲ ಎಂಬುದನ್ನು ಉಲ್ಲೇಖಿಸಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಅವಧಿಯಲ್ಲಿ ಆಲಮಟ್ಟಿ ಅಣೆಕಟ್ಟು ಎತ್ತರಿಸುವ ಸಂಬಂಧ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ವಿಚಾರವನ್ನೂ ಪತ್ರದಲ್ಲಿ ಪ್ರಸ್ತಾಪ ಮಾಡಿದ್ದಾರೆ.
ಅಕ್ಟೋಬರ್ 4ರಂದು ಯತ್ನಾಳ್ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ, ಉತ್ತರಿಸುವಂತೆ 10 ದಿನಗಳ ಕಾಲಾವಕಾಶ ನೀಡಿತ್ತು. ಆದರೆ, ಪತ್ರದ ಮೂಲಕ ಉತ್ತರ ನೀಡದೆ ನೇರ ಭೇಟಿಗೆ ಯತ್ನಾಳ್ ಮುಂದಾಗಿದ್ದಾರೆ.