ಅರಕಲಗೂಡು:ತಾಲೂಕಿನಲ್ಲಿ ರೈತರು ಬೆಳೆದ ಬೆಳೆಗಳಲ್ಲಿ ಹುಳು ಬಾಧೆ ಕಂಡು ಬಂದಿದ್ದು, ಬೆಳೆ ಕೈ ಸೇರುತ್ತೋ ಇಲ್ಲವೋ ಎಂಬ ಆತಂಕ ಸೃಷ್ಟಿಯಾಗಿದೆ.
ಜೋಳ, ಆಲೂಗಡ್ಡೆ, ತಂಬಾಕು, ಪ್ರಮುಖ ಬೆಳೆಗಳನ್ನ ನಂಬಿಕೊಂಡು ತಮ್ಮ ವಾರ್ಷಿಕ ಆರ್ಥಿಕ ವ್ಯವಸ್ಥೆಯನ್ನ ಸರಿದೂಗಿಸಿಕೊಳ್ಳುತ್ತಿದ್ದ ರೈತನಿಗೆ ಬರಸಿಡಿಲು ಬಡಿದಂತೆ ಪ್ರಾರಂಭದಿಂದಲೇ ಮಳೆಯ ಕೊರತೆ ಮತ್ತು ಹುಳುಗಳ ಬಾದೆ ಆತನ ಕನಸಿಗೆ ಕೊಳ್ಳಿ ಇಟ್ಟಂತಾಗಿದೆ.
ಮರುಭೂಮಿ ಮಿಡತೆ ಆತಂಕ
ತಾಲೂಕಿನಲ್ಲಿ ರೈತರು ಶೇ 37 ರಷ್ಟು ಬೆಸಾಯವನ್ನ ಪೂರ್ಣಗೊಳಿಸಿದ್ದಾರೆ. ಇನ್ನುಳಿದ ಶೇ 63 ರಷ್ಟು ವ್ಯವಸಾಯ ವಾರದೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಸಾಲ ಸೂಲ ಮಾಡಿ ಭೂಮಿಯನ್ನ ನಂಬಿ ಬೆಳೆ ಬೆಳೆಯಲು ಮುಂದಾಗಿರುವ ರೈತನಿಗೆ ಕಳೆದ ಸಾಲಿನಿಂದಲೂ ಹುಳುಗಳ ವಿರುದ್ಧ ಹೋರಾಟ ಮಾಡುವುದೇ ಆಗಿದೆ.
ಈ ಬಾರಿಯೂ ಪ್ರಾರಂಭದಲ್ಲೇ ಹುಳುಗಳು ಕಾಣಿಸಿಕೊಂಡಿರುವುದು ರೈತನಲ್ಲಿ ಆತಂಕ ಹೆಚ್ಚಿಸಿದೆ. ಇದರೊಂದಿಗೆ ಕೆಲ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಮರುಭೂಮಿ ಮಿಡತೆಯ ದಾಳಿಯ ಬಗ್ಗೆ ಮಾಧ್ಯಮಗಳಲ್ಲಿ ಕಂಡು ಇನ್ನು ಭಯಬೀತನಾಗಿದ್ದಾನೆ.
ಶೇ 37ರಷ್ಟು ಬಿತ್ತನೆ
ತಾಲೂಕಿನಲ್ಲಿ ಈ ಸಾಲಿನಲ್ಲಿ 45,715 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಗುರಿಯನ್ನ ಹೊಂದಲಾಗಿದ್ದು, ಈಗಾಗಲೇ ಶೇ 37 ರಷ್ಟು ಬಿತ್ತನೆಯಾಗಿದೆ. ಮಳೆ ಈಗ ಪ್ರಾರಂಭವಾಗಿರುವುದರಿಂದ ಕೃಷಿ ಚಟುವಟಿಕೆ ಬಿರುಸಿನಿಂದ ಕೂಡಿದ್ದು, ವಾರದೊಳಗೆ ಬಿತ್ತನೆ ಕಾರ್ಯ ಮುಗಿಯಲಿದೆ.
ಈಗಾಗಲೇ ಜೋಗ 8,200 ಹೆಕ್ಟೇರ್ ಬಿತ್ತನೆಯಾಗಿದ್ದು, ಇನ್ನೂ 6,500 ಹೆಕ್ಟೇರ್ ಬಾಕಿಯಿದೆ. ತಂಬಾಕು 6,420 ಹೆಕ್ಟೇರ್ ಬಿತ್ತನೆಯಾಗಿದ್ದು, ಇನ್ನು 6,000 ಹೆಕ್ಟೇರ್ ಬಾಕಿಯಿದೆ. ದ್ವಿದಳ ದಾನ್ಯ 1970 ಹೆಕ್ಟೇರ್ ಪ್ರದೇಶದಲ್ಲಿ ಇದ್ದು, ನೆಲೆಗಡಲೆ ಕಾಯಿ 180 ಹೆಕ್ಟೇರ್ ನಲ್ಲಿ ಬೆಳೆಯಲಾಗುತ್ತಿದೆ.
ಇಂತಹ ಸಂದರ್ಭದಲ್ಲಿ ಜೋಳ ಬೆಳೆಗೆ ಹುಳುವಿನ ಕಾಟ ಪ್ರಾರಂಭವಾಗಿದ್ದು ಕಂಡು ಬಂದಿದೆ. ಇದರ ಬಗ್ಗೆ ಮುಂಜಾಗ್ರತ ಕ್ರಮ ತೆಗೆದುಕೊಂಡು ಈಗಾಗಲೇ ವಿಜ್ಞಾನಿಗಳೊಂದಿಗೆ ಚರ್ಚಿಸಿ ಸೂಕ್ತ ಔಷಧಗಳನ್ನು ಒದಗಿಸುವ ಮೂಲಕ ಹುಳುಗಳನ್ನ ನಾಶಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಮರುಭೂಮಿ ಮಿಡತೆ ನಮ್ಮಲ್ಲಿ ಕಂಡು ಬಂದಿಲ್ಲ, ಹಾಗಾಗಿ ರೈತರು ಆತಂಕ ಪಡುವಂತಿಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕ ರಮೇಶ ಕುಮಾರ ತಿಳಿಸಿದರು.