ಮಂಗಳೂರು : ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವರ ವರದಿ ಸಿಕ್ಕ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಸಚಿವ ನಾಗೇಶ್ ಅವರಿಗೆ ವರದಿ ನೀಡುವಂತೆ ಹೇಳಿದ್ದೇನೆ. ನಾಳೆ ಬೆಂಗಳೂರಿಗೆ ಹೋದ ತಕ್ಷಣವೇ ವರದಿ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಸಂಪೂರ್ಣವಾಗಿ ಎಲ್ಲಾ ಆಯಾಮಗಳ ಬಗ್ಗೆ ವಿಷಯಗಳನ್ನು ವರದಿ ಮೂಲಕ ಸಲ್ಲಿಸುವುದಾಗಿ ಸಚಿವ ನಾಗೇಶ್ ತಿಳಿಸಿದ್ದಾರೆ. ಶ್ರೀ ಆದಿ ಚುಂಚನಗಿರಿ ಸ್ವಾಮೀಜಿ ಭೇಟಿ ಮಾಡಿ ಮಾತನಾಡಿದ್ದಾರೆ. ಸತ್ಯಾಂಶವನ್ನು ಆಧಾರ ಸಮೇತ ವಿವರಿಸುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು. ಮಳಲಿ ಮಸೀದಿ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.
ಏನಿದು ವಿವಾದ? :ಪಠ್ಯ ಪರಿಷ್ಕರಣೆ ವಿವಾದ ಹೊಸ ಸ್ವರೂಪದ ಜತೆಗೆ ಎರಡು ಆಯಾಮ ಪಡೆದುಕೊಂಡಿದೆ. ಒಂದು ಕಡೆ ಪಠ್ಯಪುಸ್ತಕದಿಂದ ತಮ್ಮ ಲೇಖನ ಕೈಬಿಡುವಂತೆ ಸಾಹಿತಿಗಳು ಆಗ್ರಹ ಮಾಡುತ್ತಿದ್ದರೆ, ಮತ್ತೊಂದೆಡೆ ಪ್ರತಿಷ್ಠಾನಗಳಿಂದ ಸಾಹಿತಿಗಳು ಹೊರ ನಡೆಯುತ್ತಿದ್ದಾರೆ. ಇದರಿಂದಾಗಿ ವಿವಾದ ಮತ್ತಷ್ಟು ಜಟಿಲವಾಗುವಂತಾಗಿದೆ. ಸರ್ಕಾರಕ್ಕೆ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಬಿಸಿತುಪ್ಪವಾಗಿ ಪರಿಣಮಿಸಿದೆ.