ಬೆಂಗಳೂರು: ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕಪಾಲ ಬೆಟ್ಟದಲ್ಲಿ ಧಾರ್ಮಿಕ ಕಾರ್ಯಗಳಿಗೆ ಸರ್ಕಾರ ಮಂಜೂರು ಮಾಡಿರುವ ಭೂಮಿಯಲ್ಲಿ ನ್ಯಾಯಾಲಯದ ಆದೇಶವಿಲ್ಲದೆ ಯಾವುದೇ ಕಾಮಗಾರಿ ನಡೆಸಬಾರದು ಎಂದು ಹೈಕೋರ್ಟ್ ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್ ಗೆ ನಿರ್ದೇಶಿಸಿದೆ.
ಕಪಾಲಬೆಟ್ಟದಲ್ಲಿ ಚರ್ಚ್ ನಿರ್ಮಿಸಲು ಹಾಗೂ ಧಾರ್ಮಿಕ ಚಟುವಟಿಕೆ ನಡೆಸಲು ಜಿಲ್ಲಾಡಳಿತ 10 ಎಕರೆ ಭೂಮಿಯನ್ನು ಮಂಜೂರು ಮಾಡಿರುವ ಸರ್ಕಾರದ ಆದೇಶವನ್ನು ರದ್ದುಪಡಿಸುವಂತೆ ಕೋರಿ ಹಾರೋಬೆಲೆ ಗ್ರಾಮದ ನಿವಾಸಿಗಳಾದ ಆಂಥೋಣಿ ಸ್ವಾಮಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಆಲಿಸಿದ ಪೀಠ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಮನಗರ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಹಾಗೂ ಹಾರೋಬೆಲೆ ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್‌ಗೆ ನೋಟಿಸ್ ಜಾರಿ ಮಾಡುವಂತೆ ಆದೇಶಿಸಿತು. ಹಾಗೆಯೇ, ನ್ಯಾಯಾಲಯದ ಅನುಮತಿ ಇಲ್ಲದೆ ಕಪಾಲಬೆಟ್ಟದಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಹೊರಡಿಸಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ವಾದಿಸಿ, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಬರೆದ ಪತ್ರ ಆಧರಿಸಿ 10 ಎಕರೆ ಸರ್ಕಾರಿ ಜಮೀನನ್ನು ಖಾಸಗಿ ಟ್ರಸ್ಟ್‌ಗೆ ಮಂಜೂರು ಮಾಡಲಾಗಿದೆ. ವಾಸ್ತವದಲ್ಲಿ ಯಾವುದೇ ಕ್ರೈಸ್ತ ಧರ್ಮೀಯರು ಜಾಗ ಮಂಜೂರು ಮಾಡುವಂತೆ ಮನವಿ ಸಲ್ಲಿಸಿಲ್ಲ. ಡಿ.ಕೆ ಸಹೋದರರು ತಮ್ಮ ಸ್ವ ಹಿತಾಸಕ್ತಿ, ರಾಜಕೀಯ ಸ್ವಾರ್ಥ ಮತ್ತು ಮತಬ್ಯಾಂಕ್‌ಗಾಗಿ ಟ್ರಸ್ಟ್‌ಗೆ ಜಮೀನು ಮಂಜೂರು ಮಾಡಲು ರಾಮನಗರದ ಜಿಲ್ಲಾಧಿಕಾರಿಗೆ 2017ರಲ್ಲಿ ಪತ್ರ ಬರೆದಿದ್ದಾರೆ. ಮುಂದಿನ ಡಿಸೆಂಬರ್ 25 ರಂದು ಬೆಟ್ಟದಲ್ಲಿ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ. ಆದ್ದರಿಂದ, ಚರ್ಚ್ ನಿರ್ಮಾಣ ಕಾಮಗಾರಿಗೆ ತಡೆ ನೀಡಬೇಕು ಎಂದು ಕೋರಿದರು.
ಪ್ರಕರಣದ ಹಿನ್ನೆಲೆ:
ಕನಕಪುರ ತಾಲೂಕಿನ ನಲ್ಲಹಳ್ಳಿ ಗ್ರಾಮದ ಸರ್ವೇ ನಂಬರ್ 283 ರ ಕಪಾಲಬೆಟ್ಟದಲ್ಲಿನ 10 ಎಕರೆ ಭೂಮಿಯನ್ನು ಚರ್ಚ್ ನಿರ್ಮಾಣ ಹಾಗೂ ಕ್ರೈಸ್ತ ಧರ್ಮದ ಚಟುವಟಿಕೆಗಳಿಗೆ ಮಂಜೂರು ಮಾಡಲಾಗಿದೆ. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿರುವ ಅರ್ಜಿದಾರರು, ಹುಲ್ಲುಗಾವಲು ಪ್ರದೇಶವಾಗಿರುವ ಕಪಾಲಬೆಟ್ಟವನ್ನು ಜಾನುವಾರುಗಳ ಮೇವಿಗೆ ಮೀಸಲಿಡಲಾಗಿದೆ. ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳ ಲಾಭಕ್ಕಾಗಿ ಅಥವಾ ಯಾವುದೇ ಧಾರ್ಮಿಕ ಚಟುವಟಿಕೆಗೆ ನೀಡಬಾರದು ಎಂದು ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಆದೇಶಿಸಿವೆ. ಹೀಗಿದ್ದರೂ, ಖಾಸಗಿಯವರಿಗೆ ಜಮೀನು ಮಂಜೂರು ಮಾಡಲಾಗಿದೆ. ಆದ್ದರಿಂದ, ಟ್ರಸ್ಟ್‌ಗೆ ಜಮೀನು ಮಂಜೂರು ಮಾಡಿರುವ ಸರ್ಕಾರದ ಆದೇಶ ರದ್ದುಪಡಿಸಬೇಕು ಎಂದು ಅರ್ಜಿದಾರು ಕೋರಿದ್ದಾರೆ.