ಮೊಳಕೆಯೊಡೆಯದ ಸೋಯಾಬಿನ್: ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿದ ತಜ್ಞರ ತಂಡ - Soybean crops destroyed
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಸೋಯಾಬಿನ್ ಬೀಜ ಬಿತ್ತನೆ ಮಾಡಿ ವಾರಗಳೇ ಕಳೆದರೂ ಇನ್ನೂ ಬೆಳೆ ಮೊಳಕೆ ಒಡೆದಿಲ್ಲ. ಇದರಿಂದ ರೈತರು ಕಳಪೆ ಬೀಜ ವಿತರಣೆ ಮಾಡಿರುವ ಅನುಮಾನ ವ್ಯಕ್ತಪಡಿಸಿದ್ದಾರೆ.
ಬಸವಕಲ್ಯಾಣ:ತಾಲೂಕಿನಲ್ಲಿ ಸೋಯಾಬಿನ್ ಬೀಜ ಬಿತ್ತನೆ ಮಾಡಿ ವಾರಗಳು ಉರುಳಿದರೂ ಮೊಳಕೆಯೊಡೆಯದ ಪರಿಣಾಮ ರೈತರು ಕಂಗಾಲಾಗಿದ್ದಾರೆ.
ತಾಲೂಕಿನಾದ್ಯಂತ ಮುಂಗಾರು ಮಳೆ ಉತ್ತಮವಾಗಿ ಸುರಿದು ರೈತಲ್ಲಿ ಭರವಸೆ ಮೂಡಿಸಿತ್ತು. ಆದರೆ ತಾಲೂಕಿನ ಧನ್ನೂರಾ, ಹುಲಸೂರ ತಾಲೂಕಿನ ಗೋರ್ಟಾ(ಬಿ), ಬೇಲೂರ, ಧನ್ನೂರ ಗ್ರಾಮದ ವ್ಯಾಪ್ತಿಯ ಕೆಲ ಹೊಲಗಳಲ್ಲಿ ಬಿತ್ತಿದ ಬೀಜ ಸಮರ್ಪಕವಾಗಿ ಮೊಳಕೆ ಒಡೆಯದೆ ರೈತನನ್ನು ಚಿಂತೆಗೆ ದೂಕಿದ್ದು, ಕಳಪೆ ಬೀಜ ವಿತರಣೆಯೇ ಇದಕ್ಕೆ ಪ್ರಮುಖ ಕಾರಣ ಎನ್ನುವ ದೂರುಗಳು ಕೇಳಿ ಬಂದಿದ್ದವು.
ಹುಲಸೂರ ತಾಲೂಕಿನ ಗೋರ್ಟಾ(ಬಿ)ಗ್ರಾಮದ ವ್ಯಾಪ್ತಿಯಲ್ಲಿಯ ಓಂಕಾರ ಕಣಜೆ ಎನ್ನುವವರು 4.27 ಎಕರೆ ಪ್ರದೇಶದಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದ ಭಾಲ್ಕಿ ಕೇಂದ್ರದಿಂದ ಮೂರು ಬ್ಯಾಗ್ ಸೋಯಾಬಿನ್ ಬೀಜ ಖರೀದಿಸಿ ಬಿತ್ತನೆ ಮಾಡಿದರು. ಆದರೆ ಬೀಜ ಮೊಳಕೆ ಒಡೆಯದ ಹಿನ್ನೆಲೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದ್ದರು.
ಮೊಳಕೆಯೊಡೆಯಲು ಅಗತ್ಯವಿರುವ ತೇವಾಂಶವಿದ್ದರೂ ಕೂಡ ಮೊಳಕೆ ಬಂದಿಲ್ಲ ಎಂದು ಗಮನಕ್ಕೆ ತಂದಿದ್ದರು. ಅಲ್ಲದೆ ಹೊಲಕ್ಕೆ ಬಂದು ಪರಿಶೀಲನೆ ನಡೆಸಬೇಕು. ಮತ್ತೆ ಬಿತ್ತನೆಗೆ ಹೊಸ ಬೀಜ ನೀಡಬೇಕು ಹಾಗೂ ಪರಿಹಾರ ನೀಡಬೇಕು ಎಂದು ಪತ್ರದಲ್ಲಿ ಕೋರಿದ್ದರು.
ವಿಜ್ಞಾನಿಗಳ ತಂಡ ಭೇಟಿ
ರೈತರ ದೂರಿನ ಹಿನ್ನೆಲೆಯಲ್ಲಿ ಕಲಬುರಗಿಯ ಕೃಷಿ ಸಂಶೋಧನಾ ಮತ್ತು ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಮಲ್ಲಿಕಾರ್ಜುನ ಕೆಂಗನಾಳ, ಡಾ. ಡಿ.ಹೆಚ್.ಪಾಟೀಲ್, ಡಾ. ಲೋಕೇಶ, ಡಾ. ಶೀಲಾ ಅವರನ್ನೊಳಗೊಂಡ ತಂಡ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪರೀಕ್ಷೆಗಾಗಿ ಕೆಲ ಬಿತ್ತಿದ ಬೀಜಗಳನ್ನು ಸಂಗ್ರಹಿಸಿದೆ.