ಹರಿಹರದಲ್ಲಿ ಹಳಿ ತಪ್ಪಿದ ರೈಲ್ವೆ ಇಂಜಿನ್ ... ಕೆಲ ಕಾಲ ಆತಂಕ ಸೃಷ್ಟಿ - Rail engine came out from way
ಬೋಗಿಗಳಿಲ್ಲದ ಡಬಲ್ ಇಂಜಿನ್ ರೈಲಿನ ಹಳಿ ಬದಲಾವಣೆ ಸಂದರ್ಭದಲ್ಲಿ ರೈಲ್ವೆ ಇಂಜಿನ್ ನ ಎಂಟು ಗಾಲಿಗಳು ಹಳಿ ತಪ್ಪಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಹರಿಹರ:ರೈಲ್ವೆ ಇಂಜಿನ್ ಹಳಿ ತಪ್ಪಿ (ಡೀರೈಲ್) ಆತಂಕ ಸೃಷ್ಟಿಸಿದ ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ಶನಿವಾರ ರಾತ್ರಿ ನಡೆದಿದೆ.
ಬೋಗಿಗಳಿಲ್ಲದ ಡಬಲ್ ಇಂಜಿನ್ ನನ್ನು ಒಂದು ಹಳಿಯಿಂದ ಇನ್ನೊಂದು ಹಳಿಗೆ ಸಾಗಿಸುವ ಪ್ರಕ್ರಿಯೆ ನಿಲ್ದಾಣದ ಹೊರ ಆವರಣದಲ್ಲಿ 1ನೇ ರೈಲ್ವೆಗೇಟಿನ ದಿಕ್ಕಿನಲ್ಲಿ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಮುಂದಿನ ಇಂಜಿನ್‌ನ ಎಂಟು ಗಾಲಿಗಳು ಬಲ ಹಳಿಯಿಂದ ಪಕ್ಕಕ್ಕೆ ಇಳಿದಿವೆ.
ಆಗ ಹಿಂದಿನ ಇಂಜಿನ್‌ನಲ್ಲಿದ್ದ ಚಾಲಕ ತಕ್ಷಣ ಚಾಲನೆ ಸ್ಥಗಿತಗೊಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ತಾಂತ್ರಿಕ ಸಿಬ್ಬಂದಿ ಇಂಜಿನ್‌ಗೆ ಜಾಕ್‌ವೆಲ್‌ಗಳನ್ನು ಅಳವಡಿಸಿ ಗಾಲಿಗಳನ್ನು ಸರಿಪಡಿಸಿ, ಸೂಕ್ತ ಹಳಿಗೆ ಸಾಗಿಸಿದರು. ಸಂಜೆ 7ರಿಂದ ಆರಂಭವಾದ ಕಾರ್ಯಚರಣೆ ಮಧ್ಯರಾತ್ರಿ 1ರವರೆಗೆ ನಡೆಯಿತು.
ಕೊರೊನಾ ವೈರಸ್‌ನಿಂದಾಗಿ ರೈಲುಗಳ ಸಂಚಾರ ಸೀಮಿತಗೊಂಡಿರುವುದರಿಂದ ಯಾವುದೇ ಅಪಘಾತ ಸಂಭವಿಸಿಲ್ಲ. ಈ ಘಟನೆ ನಡೆಯಲು ಸಿಗ್ನಲ್ ಪರಿಪಾಲನೆ ಮಾಡದಿರುವುದು ಅಥವಾ ಯಾವ ಕಾರಣದಿಂದ ಇಂಜಿನ್ ಹಳಿತಪ್ಪಿತು ಎಂದು ಇಲಾಖೆಯಿಂದ ವಿಚಾರಣೆ ನಡೆಸಲಾಗುವುದೆಂದು ತಿಳಿದು ಬಂದಿದೆ.