ಚಿತ್ರದುರ್ಗ:ಇಳಿ ವಯಸ್ಸಿನಲ್ಲಿ ಮದುವೆ ಆಗಲು ಬಯಸಿದ ವೃದ್ಧನೋರ್ವನ ಜೀವನವೇ ದುರಂತ ಅಂತ್ಯ ಕಂಡಿದೆ. ಮದುವೆಯಾಗಲು ಹುಡುಗಿ ಹುಡುಕಿ ಕೊಡಿ ಎಂದಿದ್ದ 70ರ ಪ್ರಾಯದ ತಾತ ಬ್ರೋಕರ್ಗಳಿಂದಲೇ ಕೊಲೆಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ತಾಲೂಕಿನ ಭೀಮಸಮುದ್ರ ಗ್ರಾಮದ ತಿಮ್ಮಣ್ಣ ಎಂಬ 70 ವರ್ಷದ ವೃದ್ಧ ಹೆಣ್ಣು ಹುಡುಕಿಕೊಡಿ ಎಂದು ಬ್ರೋಕರ್ಗಳಿಗೆ ಹಣ ಕೊಟ್ಟು ಅವರಿಂದಲೇ ಹತ್ಯೆಯಾಗಿದ್ದಾನೆ. ಕೊಲೆಯಾದ ತಿಮ್ಮಣ್ಣನಿಗೆ ಈಗಗಾಲೇ ಮದುವೆಯಾಗಿತ್ತು. ಮೊದಲ ಪತ್ನಿ ಸಾವನ್ನಪ್ಪಿದ್ದರಿಂದ ಇಳಿ ವಯಸ್ಸಿನಲ್ಲಿ ಮತ್ತೆ ಎರಡನೇ ಮದುವೆಯಾಗಲು ಚಿತ್ರದುರ್ಗ ಮೂಲದ ಬ್ರೋಕರ್ಗಳಾದ ಅಜಯ್ ಹಾಗೂ ನಾಗರಾಜ್ ಎಂಬುವರಿಗೆ ಎರಡು ಲಕ್ಷ ರೂಪಾಯಿ ಹಣ ಕೊಟ್ಟು ಹೆಣ್ಣು ಹುಡುಕಿ ಕೊಡುವಂತೆ ಕೋರಿದ್ದ ಎಂದು ಹೇಳಲಾಗ್ತಿದೆ.
ಬ್ರೋಕರ್ಗಳು ಸಮಯಕ್ಕೆ ಸರಿಯಾಗಿ ಹುಡುಗಿಯನ್ನು ಹುಡುಕಿ ಕೊಡದಿದ್ದಕ್ಕೆ ತಿಮ್ಮಣ್ಣ ತನ್ನ ಹಣವನ್ನು ಹಿಂದುರಿಗಿಸುವಂತೆ ದಬಾಯಿಸಿದ್ದನಂತೆ. ಇನ್ನು ತಿಮ್ಮಣ್ಣನ ಕಿರುಕುಳದಿಂದ ಆಕ್ರೋಶಗೊಂಡ ಬ್ರೋಕರ್ಗಳಾದ ನಾಗರಾಜ್ ಹಾಗೂ ಅಜಯ್ ತಮ್ಮೊಂದಿಗೆ ಇನ್ನಿಬ್ಬರನ್ನು ಸೇರಿಸಿಕೊಂಡು ಈತನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಬಳಿಕ ಹೊಸದುರ್ಗದಲ್ಲಿ ಹೆಣ್ಣು ಸಿಕ್ಕಿದೆ, ಮದುವೆಗೆ ರೆಡಿಯಾಗಿ ಬರುವಂತೆ ಹೇಳಿದ ದಿನವೇ ಆ ವೃದ್ಧನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂದು ಎಸ್ಪಿ ಡಾ. ಅರುಣ್ ಮಾಹಿತಿ ನೀಡಿದ್ದಾರೆ.
ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ಬೆನ್ನತ್ತಿದ್ದ ಪೊಲೀಸರು ಅಜಯ್, ಕಿರಣ್ ಸೇರಿದಂತೆ ನಾಗರಾಜ್ ಎಂಬ ಹೆಸರಿನ ಇಬ್ಬರು ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.