ಮಂಗಳೂರು: ನಗರದಲ್ಲಿ ಸಾಕಷ್ಟು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಚೇರಿಯನ್ನು ಗೋವಾದೊಂದಿಗೆ ವಿಲೀನ ಮಾಡದಂತೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಕೇಂದ್ರಿಯ ನೇರ ತೆರಿಗೆ ಮಂಡಳಿಯ ನಿರ್ಧಾರದಂತೆ ಕಳೆದ ಎರಡು ದಶಕಗಳಿಗಿಂತ ಹೆಚ್ಚು ಕಾಲ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆದಾಯ ತೆರಿಗೆ ಪ್ರಧಾನ ಆಯುಕ್ತರ (ಆಡಳಿತ) ಕಚೇರಿಯನ್ನು ಗೋವಾದ ಪಣಜಿಯ ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಚೇರಿಯೊಂದಿಗೆ ವಿಲೀನಗೊಳಿಸಲಾಗುತ್ತಿರುವ ವಿಷಯವು ಕರಾವಳಿ ಕರ್ನಾಟಕದ ಉದ್ಯಮಿಗಳಲ್ಲಿ ಹಾಗೂ ವೃತ್ತಿಪರ ಚಾರ್ಟರ್ಡ್ ಅಕೌಂಟೆಂಟ್ ಗಳಲ್ಲಿ ಸಂಪೂರ್ಣ ಅಸಮಾಧಾನವನ್ನುಂಟು ಮಾಡಿದ್ದು, ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಚೇರಿಯನ್ನು ವಿಲೀನ ಮಾಡದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಮನ್ ಅವರಿಗೆ ಕಟೀಲ್ ಮನವಿ ಮಾಡಿದ್ದಾರೆ.
ಮಂಗಳೂರು ಕರ್ನಾಟಕ ರಾಜ್ಯದ ಎರಡನೇ ಅತಿದೊಡ್ಡ ನಗರವಾಗಿದ್ದು, ಈ ನಗರವು ರಸ್ತೆ, ವಿಮಾನ, ರೈಲ್ವೆ ಹಾಗೂ ಜಲಸಂಪರ್ಕ ಹೊಂದಿದೆ. ಶೈಕ್ಷಣಿಕ ಕೇಂದ್ರವೆಂದು ಕರೆಯಲ್ಪಡುವ ಶೇಷ್ಠ ಧಾರ್ಮಿಕ ಪರಂಪರೆಯನ್ನು ಹೊಂದಿದ್ದು, ಅನೇಕ ಬ್ಯಾಂಕಿಂಗ್ ಸಂಸ್ಥೆಗಳಿಗೆ ಜನ್ಮ ನೀಡಿದ ಪ್ರದೇಶ. ಇದು ನಮ್ಮ ರಾಜ್ಯಕ್ಕೆ ಮತ್ತು ನಮ್ಮ ದೇಶಕ್ಕೆ ಹೆಮ್ಮೆಯಾಗಿದೆ. ಜಿಲ್ಲೆಯ ನಾಗರಿಕರು ಅತ್ಯಂತ ವಿದ್ಯಾವಂತರೆಂದು ಪರಿಗಣಿಸಲಾಗುತ್ತಿದ್ದು, ತೆರಿಗೆದಾರರ ಪ್ರಾಮಾಣಿಕತೆ, ಸುಮಾರು 4.50 ಲಕ್ಷ ಮತ್ತು ಹೆಚ್ಚಿನ ತೆರಿಗೆ ಪಾವತಿದಾರರು ಮತ್ತು ಸುಮಾರು 2,000 ವೃತ್ತಿಪರರನ್ನು ಹೊಂದಿರುವ ಮಂಗಳೂರಿನ ಆದಾಯ ತೆರಿಗೆ ಕಚೇರಿಯು ತೆರಿಗೆದಾರರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಧಾನ ಆಯುಕ್ತರ ಕಚೇರಿಯನ್ನು ಬೇರೆ ರಾಜ್ಯದೊಂದಿಗೆ ವಿಲೀನಗೊಳಿಸುವುದರಿಂದ ಈ ಪ್ರದೇಶದ ನಾಗರಿಕರ ಹಿತಾಸಕ್ತಿಗೆ ಧಕ್ಕೆ ಉಂಟಾಗಲಿದೆ ಎಂದು ತಿಳಿಸಿದ್ದಾರೆ.