ಕರ್ನಾಟಕ

karnataka

By

Published : Sep 13, 2020, 2:51 PM IST

ETV Bharat / state

ಕೆಲ ಪಿಡಿಒಗಳು‌ ರಾಕ್ಷಸ ಪ್ರವೃತ್ತಿ ಹೊಂದಿದ್ದಾರೆ ಎಂಬುದು ನಿಜ: ನನ್ನ ಹೇಳಿಕೆಗೆ ಈಗಲೂ ಬದ್ಧ ಎಂದ ಸೋಮಣ್ಣ

ಪಿಡಿಒಗಳು ಪ್ರತಿಭಟನೆ ಮಾಡುವುದಿದ್ದರೆ ಮಾಡಲಿ, ಅದಕ್ಕೆ ನನ್ನದೇನು ಅಭ್ಯಂತರವಿಲ್ಲ. ನಾನು ಎಲ್ಲರಿಗೂ ಆ ಮಾತನ್ನು ಹೇಳಿಲ್ಲ, ಕೆಲ ಪಿಡಿಒಗಳು ರಾಕ್ಷಸ ಪ್ರವೃತ್ತಿ ಹೊಂದಿದ್ದಾರೆ ಎಂದಿದ್ದೇನೆ ಎಂದು ಸಚಿವ ವಿ.ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.

V somanna
V somanna

ಬೆಂಗಳೂರು: ಪಿಡಿಒಗಳಲ್ಲಿ ಕೆಲವರು ರಾಕ್ಷಸ ಪ್ರವೃತ್ತಿ ಹೊಂದಿದ್ದಾರೆ ಎನ್ನುವ ಹೇಳಿಕೆ ನೀಡಿದ್ದು ನಿಜ. ಯಾವ ಪಿಡಿಒಗಳು ಸರಿಯಾಗಿ ಕೆಲಸ ಮಾಡುವುದಿಲ್ಲವೋ ಅವರಿಗೆ ನಾನು ಹೇಳಿದ್ದೇನೆ, ನಾನು ನನ್ನ ಹೇಳಿಕೆಗೆ ಈಗಲೂ ಬದ್ಧನಿದ್ದೇನೆ. ನನ್ನ ವಿರುದ್ಧ ಪ್ರತಿಭಟನೆ ಮಾಡುವುದಿದ್ದರೆ ಮಾಡಿಕೊಳ್ಳಲಿ ಎಂದು ವಸತಿ ಸಚಿವ ವಿ.ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.

ವಿಜಯನಗರದಲ್ಲಿನ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಂದು ವರ್ಷದಿಂದ ವಸತಿ ಇಲಾಖೆ ಸಚಿವನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ವಸತಿ ಸಚಿವನಾದ ನಂತರ ಇಲಾಖೆಯನ್ನು ಪರಾಮರ್ಶೆ ಮಾಡಿದ್ದೇನೆ, ಗೊಂದಲದ ಗೂಡಾಗಿದ್ದ ಇಲಾಖೆಯನ್ನು ಲಾಜಿಕಲ್ ಎಂಡ್ ಗೆ ತಂದಿದ್ದೇನೆ. ಅರ್ಹ ಫಲಾನುಭವಿಗಳನ್ನು ಇಲಾಖೆಯ ವತಿಯಿಂದ ಆಯ್ಕೆ ಮಾಡಿದ್ದೇವೆ. 8 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಪಟ್ಟಿ ಇದ್ದು, ಈ ಬಗ್ಗೆ ಚರ್ಚೆ ಮಾಡಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದೇನೆ ಎಂದರು.

ರಾಜ್ಯದ 188 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಧಾನ ಮಂತ್ರಿ ವಸತಿ ಯೋಜನೆ ಅನ್ವಯವಾಗುತ್ತದೆ. ಹೀಗಾಗಿ ಎಲ್ಲಾ 188 ಶಾಸಕರಿಗೂ ಪತ್ರ ಬರೆದು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದೇನೆ ಎಂದರು.

ಹಾಸನ ಜಿಲ್ಲೆಗೆ ಭೇಟಿ ನೀಡಿ ಅಲ್ಲಿನ ಏಳು ಶಾಸಕರ ಜೊತೆ ಸಭೆ ಮಾಡಿದ್ದೇನೆ. ಹೆಚ್.ಡಿ ರೇವಣ್ಣ ಅನರ್ಹ ಫಲಾನುಭವಿಗಳಿಗೆ ಮನೆ ಕೊಡಲಾಗುತ್ತಿದೆ ಎಂದಿದ್ದರು. ಅರಸಿಕೆರೆ ಮತ್ತು ಅರಕಲಗೂಡಿನಲ್ಲಿ ಅನರ್ಹರಿಗೆ ಮನೆಗಳ ಹಂಚಿಕೆ ಆರೋಪ ಕೇಳಿ ಬಂದಿತ್ತು. ಹಾಗಾಗಿ ಕೆಲ ಪಿಡಿಒಗಳು ರಾಕ್ಷಸರಿದ್ದಾರೆ ಎಂದಿದ್ದೆ. ಪಿಡಿಒಗಳು ಅನ್ಯಾಯ ಮಾಡಬಾರದು, ಅವರು ಹೇಳಿದ್ದೆ ಶಾಸನವಲ್ಲ. ಸರಿಯಾದ ನ್ಯಾಯ ಕೊಡಿಸಬೇಕು, ನಾವು ಬಡವರಿಗೆ ಕೊಡುವ ಮನೆಗಳಲ್ಲಿ ಅನ್ಯಾಯವಾದರೆ ಹೇಗೆ ಸಹಿಸುವುದು?, ಹೀಗಾಗಿ ನಾನು ರಾಕ್ಷಸ ಪ್ರವೃತ್ತಿ ಎಂದಿದ್ದು ನಿಜ. ಇದನ್ನು ಸಿಎಂ ಯಡಿಯೂರಪ್ಪನವರ ಗಮನಕ್ಕೂ ತಂದಿದ್ದೇನೆ ಎಂದರು.

ಪ್ರತಿಭಟನೆ ಮಾಡಿಕೊಳ್ಳಲಿ:
ಪಿಡಿಒಗಳು ಪ್ರತಿಭಟನೆ ಮಾಡುವುದಿದ್ದರೆ ಮಾಡಲಿ, ಅದಕ್ಕೆ ನನ್ನದೇನು ಅಭ್ಯಂತರವಿಲ್ಲ. ನಾನು ಎಲ್ಲರಿಗೂ ಆ ಮಾತನ್ನು ಹೇಳಿಲ್ಲ, ಕೆಲ ಪಿಡಿಒಗಳು ರಾಕ್ಷಸ ಪ್ರವೃತ್ತಿ ಹೊಂದಿದ್ದಾರೆ ಎಂದಿದ್ದೇನೆ. ನಮಗೆ ಕೇಂದ್ರದಿಂದ ಬರುವುದು 1.20 ಲಕ್ಷ ಮನೆಗಳು ಮಾತ್ರ. ರಾಜ್ಯದ 188 ವಿಧಾನಸಭಾ ಕ್ಷೇತ್ರಗಳಿಗೆ ಇದು ಅನ್ವಯವಾಗಲಿದೆ. ಪಿಡಿಒಗಳು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ನಾನು ಅಂದು ಹೇಳಿದ್ದು ಕೆಲ ರಾಕ್ಷಸ ಪ್ರವೃತ್ತಿ ಹೊಂದಿರುವ ಪಿಡಿಒಗಳಿಗೆ ಮಾತ್ರ. ಇಂದು ಕೂಡ ನಾನು ನನ್ನ ಹೇಳಿಕೆಗೆ ಬದ್ಧನಿದ್ದೇನೆ, ಯಾವ ಪಿಡಿಒಗಳು ಸರಿಯಾಗಿ ಕೆಲಸ ಮಾಡುವುದಿಲ್ಲವೋ ಅವರಿಗೆ ನಾನು ಹೇಳಿದ್ದು ಎಂದರು.

ಮೂರನೇ ವ್ಯಕ್ತಿಯಿಂದ‌ ತನಿಖೆ:
ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ಅಕ್ರಮ ಆಗಿದೆ ಎನ್ನುವುದರ ಪುಸ್ತಕ ಸಿದ್ಧವಾಗುತ್ತಿದೆ. ಬೀದರ್ ನಲ್ಲಿ ಅನರ್ಹ ಫಲಾನುಭವಿಗಳಿಗೆ ಮನೆಗಳ ಹಂಚಿಕೆ ಆಗುತ್ತಿದೆ. ಈ ಕುರಿತು ಮೂರನೇ ವ್ಯಕ್ತಿಗಳಿಂದ ಪರಿಶೀಲನೆ ಮಾಡಿಸುತ್ತೇವೆ. ನಮ್ಮ ಇಲಾಖೆಯಲ್ಲಿ ಎಲ್ಲವೂ ಪಾರದರ್ಶಕವಾಗಿರುವ ವ್ಯವಸ್ಥೆ ತರುತ್ತೇನೆ ಎಂದರು.

ನಾನು ಗ್ರಾಮೀಣಾಭಿವೃದ್ಧಿ ಹಾಗೂ ವಿವಿಧ ಇಲಾಖೆಗಳ ಮೇಲೆ ಅವಲಂಬಿತವಾಗಿ ಕೆಲಸ ಮಾಡಬೇಕು. ನಾನು ತಪ್ಪು ಮಾಡಬೇಡಿ ಎಂದಷ್ಟೇ ಹೇಳಿದ್ದೇನೆ. ಬಹಳಷ್ಟು ಮಂದಿ ಪಿಡಿಒಗಳಲ್ಲಿ ಪಾರದರ್ಶಕತೆ ಇರುವುದಿಲ್ಲ, ಅಂತಹ ಪಿಡಿಒಗಳ ವಿರುದ್ಧ ನಾನು ಮಾತನಾಡಿದ್ದೇನೆ. ನನ್ನ ಹೇಳಿಕೆಯಿಂದ ಗೌರವದಿಂದ ಕೆಲಸ ಮಾಡುವ ಪಿಡಿಒಗಳಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಬಡವರ ಪರವಾಗಿ ನಾನು ಪಿಡಿಒಗಳ ಬಳಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.

ವಿ.ಸೋಮಣ್ಣ ಇನ್ನೂ ಬದುಕಿದ್ದಾನೆ. ನಾನು ತಪ್ಪು ಮಾಡಿದ್ದರೆ ನೇಣುಹಾಕಿಕೊಳ್ಳಲು ಸಿದ್ಧನಿದ್ದೇನೆ. ನಾನು ಯಾರ ಬಗ್ಗೆಯಾದರೂ ಸಣ್ಣದಾಗಿ ನಡೆದುಕೊಂಡಿದ್ದರೆ, ಯಾರ ಬಗ್ಗೆಯಾದರೂ ನಾನು ಅಪಚಾರ ಮಾಡಿದ್ದರೆ ನೇಣು ಹಾಕಿಕೊಳ್ಳಲು ತಯಾರಿದ್ದೇನೆ. ಬಡವರಿಗಾಗಿ ಶಾಸಕರ ಸಲಹೆ ಸ್ವೀಕರಿಸಬೇಕು, ಅವರು ಹೇಳಿದಂತೆ ಅವರ ಸಲಹೆಗಳನ್ನು ನಾನು ಕಾರ್ಯರೂಪಕ್ಕೆ ತರಬೇಕು. ಇಲ್ಲ ಅಂದರೆ ನಾನು ಕೆಲಸಕ್ಕೆ ಬಾರದ ವ್ಯಕ್ತಿಯಾಗಿ ಬಿಡುತ್ತೇನೆ ಎಂದು ತಮ್ಮ ಕಾರ್ಯವೈಖರಿಯನ್ನು ಸಚಿವ ಸೋಮಣ್ಣ ಸಮರ್ಥಿಸಿಕೊಂಡರು.

ABOUT THE AUTHOR

...view details