ನೇಕಾರರ ಸಮಸ್ಯೆ: ಸಚಿವೆ ಜೊಲ್ಲೆ ನೇತೃತ್ವದ ನಿಯೋಗಕ್ಕೆ ಸಿಎಂ ಸಕಾರಾತ್ಮಕ ಸ್ಪಂದನೆ - ಸಚಿವೆ ಶಶಿಕಲಾ ಜೊಲ್ಲೆ ನಿಯೋಗ ಮನವಿ
ಸಂಕಷ್ಟದಲ್ಲಿರುವ ನೇಕಾರ ಸಮುದಾಯದ ಸಹಾಯಕ್ಕೆ ಸರ್ಕಾರ ಮುಂದಾಗುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಶಶಿಕಲಾ ಜೊಲ್ಲೆ ನೇತೃತ್ವದ ನಿಯೋಗ ಮನವಿ ಸಲ್ಲಿಸಿದೆ.

ಬೆಳಗಾವಿ:ಲಾಕ್‍ಡೌನ್ ಪರಿಣಾಮ ನೇಕಾರರು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಸಿಗದೆ ತೀವ್ರ ತೊಂದರೆಗೆ ಸಿಲುಕಿದ್ದು, ನೇಕಾರ ಸಮುದಾಯದ ಸಹಾಯಕ್ಕೆ ಮುಂದಾಗುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿತು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ಸಚಿವರ ನೇತೃತ್ವದ ನಿಯೋಗ, ರಾಜ್ಯ ಸರ್ಕಾರ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಸೀರೆಗಳನ್ನು ಸರಬರಾಜು ಮಾಡುತ್ತಿದ್ದು, ಈ ಸೀರೆಗಳನ್ನು ನೇರವಾಗಿ ನೇಕಾರರಿಂದಲೇ ಖರೀದಿಸಬೇಕು ಎಂದು ಮನವಿ ಮಾಡಿತು.
ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್‍ಡೌನ್ ಜಾರಿಯಾದ್ದರಿಂದ ರಾಜ್ಯದ ನೇಕಾರರ ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲದೆ ಆ ಸಮುದಾಯ ಆರ್ಥಿಕವಾಗಿ ತೀವ್ರ ಪೆಟ್ಟು ತಿಂದಿದೆ ಎಂಬ ಸಚಿವರ ನಿಯೋಗದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಬಿ.ಎಸ್.ಯಡಿಯೂರಪ್ಪ, ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.