ಕರ್ನಾಟಕ

karnataka

ETV Bharat / state

ಸಾಹಿತಿ ಹೀ.ಚಿ.ಶಾಂತವೀರಯ್ಯ ನಿಧನ: ಸಂತಾಪ ಸೂಚಿಸಿದ ಗಣ್ಯರು - ಶಾಂತವೀರಯ್ಯ ಡೆತ್ ನ್ಯೂಸ್

ಕನ್ನಡ, ಸಂಸ್ಕೃತ, ಹಿಂದಿ ಭಾಷೆಯಲ್ಲಿ ಪಾಂಡಿತ್ಯ ಹೊಂದಿದ್ದ ಸಾಹಿತಿ ಹೀ.ಚಿ.ಶಾಂತವೀರಯ್ಯನವರು ನಿಧನರಾಗಿದ್ದು, ಇಂದು ಸಂಜೆ 4 ಗಂಟೆಗೆ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಜರುಗಲಿದೆ.

ಶಾಂತವೀರಯ್ಯ
ಶಾಂತವೀರಯ್ಯ

By

Published : Sep 28, 2020, 2:26 PM IST

ಬೆಂಗಳೂರು: ಕೆಲ ತಿಂಗಳಿಂದ ಲಿವರ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಸಾಹಿತಿ ಹೀ.ಚಿ.ಶಾಂತವೀರಯ್ಯ ನಿಧನರಾಗಿದ್ದು, ಇಂದು ಸಂಜೆ 4 ಗಂಟೆಗೆ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಜರುಗಲಿದೆ ಎಂದು ಅವರ ಪುತ್ರ ಡಾ. ಶ್ರೀಪ್ರಸಾದ್ ಹೆಚ್.ಎಸ್. ತಿಳಿಸಿದ್ದಾರೆ.

ಶಾಂತವೀರಯ್ಯ ಅವರು ಮೂಲತಃ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹೀಚನೂರಿನವರು. ಕನ್ನಡ, ಸಂಸ್ಕೃತ, ಹಿಂದಿ ಭಾಷೆಯಲ್ಲಿ ಪಾಂಡಿತ್ಯ ಹೊಂದಿದ್ದರು. ಚಿಕ್ಕನಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ಅವರು, 1962ರಲ್ಲಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನ ಸಹಾಯಕ ಸಂಪಾದಕರಾಗಿದ್ದರು.

‘ವಿನೋದದಾಸ’ ಎಂಬ ಅಂಕಿತನಾಮದೊಂದಿಗೆ ನೂರಾರು ಹಾಸ್ಯ ಲೇಖನಗಳನ್ನು ರಚಿಸಿದ್ದರು. ಕನ್ನಡ ನಿಘಂಟು, ಸಂಕ್ಷಿಪ್ತ ನಿಘಂಟು, ವೀರಶೈವ ಪಾರಿಭಾಷಿಕ ಪದಕೋಶ, ಕನ್ನಡ ಸಾಹಿತ್ಯ ಪರಿಚಯ, ನೀತಿರಾಶಿ, ವಿನೋದದಾಸ, ಸಾವಿರದ ಕೋಶ, ಗಾದೆಗಳ ಸಾರ, ಹರಿಭಕ್ತಿಸಾರ, ಗಾದೆಗಳ ಸಾಗರ, ಕುರುಕ್ಷೇತ್ರ, ಗುಣಗಳ್ಳರ ಕಥೆಗಳು, ಕನ್ನಡ ಜನಪದ ಕತೆಗಳು, ಪುಷ್ಪಗಿರಿ, ಸ್ಮರಣೀಯರು, ಕನ್ನಡ - ಇಂಗ್ಲಿಷ್ ನಿಘಂಟು, ಕನ್ನಡಮಣಿ ನಿಘಂಟು ಅವರ ಪ್ರಮುಖ ಕೃತಿಗಳು.

ಶ್ರೀಯುತರಿಗೆ ರಾಜ್ಯೋತ್ಸವ ಪ್ರಶಸ್ತಿ, ಕಿಟಲ್ ಪ್ರಶಸ್ತಿ, ಸ್ಪಂದನಾ ಪ್ರಶಸ್ತಿ, ಶಿವಲಿಂಗ ಪ್ರಶಸ್ತಿ, ಕನ್ನಡ ರತ್ನ, ಸಾಹಿತ್ಯ ಶ್ರೀ ಭಾರತ ಭಾಷಾಭೂಷಣ, ಕೆಂಪೇಗೌಡ ಪ್ರಶಸ್ತಿ, ನಾಡಭೂಷಣ ಪ್ರಶಸ್ತಿ ಲಭಿಸಿವೆ.

ಇನ್ನು ಶಾಂತವೀರಯ್ಯನವರ ನಿಧನಕ್ಕೆ ವಸತಿ ಸಚಿವ ಸೋಮಣ್ಣ ಸಂತಾಪ ಸೂಚಿಸಿದ್ದು, ಕನ್ನಡ ನಿಘಂಟಿನ ಉಪ ಸಂಪಾದಕರಾಗಿದ್ದ ಅವರು, ಕನ್ನಡ ಸಾಹಿತ್ಯ ಚರಿತ್ರೆಯ ಸಂಪುಟಗಳು ಸೇರಿದಂತೆ ಹತ್ತಾರು ಗ್ರಂಥಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಅವರ ನಿಧನದ ದುಃಖ ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ಭಗವಂತ ನೀಡಲಿ ಎಂದು ಸಚಿವರು ಪ್ರಾರ್ಥಿಸಿದ್ದಾರೆ.

ಜೊತೆಗೆ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ. ಮನು ಬಳಿಗಾರ್​ ಕೂಡ ಸಂತಾಪ ಸೂಚಿಸಿದ್ದಾರೆ. ಕನ್ನಡದಲ್ಲಿ ಹತ್ತಾರು ಗ್ರಂಥಗಳನ್ನು ರಚಿಸಿರುವ ಇವರು ಸಾಹಿತ್ಯ ಪರಿಷತ್​​ನ ನಿಘಂಟಿನ ಕಾರ್ಯದಲ್ಲಿ ಸಹ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಯಾವುದೇ ವಿಷಯವಾದರೂ ಆಕರ್ಷಕರಾಗಿ ಮಾತನಾಡುತ್ತಿದ್ದರು. ರಾಜಧಾನಿ ಸೇರಿದಂತೆ ಹಲವೆಡೆ ಕನ್ನಡ ಕಲಿಕಾ ತರಗತಿಗಳನ್ನು ನಡೆಸಿ‌, ಸಾವಿರಾರು ಮಂದಿಗೆ ಕನ್ನಡ ಕಲಿಸಿದ್ದಾರೆ. ಹೀ.ಚಿ. ಅವರ ಆಗಲಿಕೆ ಸಾಹಿತ್ಯ ಕ್ಷೇತ್ರಕ್ಕೆ ನಷ್ಟ ಎಂದು ಸಂತಾಪ ಸೂಚಿಸಿದ್ದಾರೆ.

ABOUT THE AUTHOR

...view details