ಕೊಡಗು: ಕೊರೊನಾ ಹಾವಳಿ ಮಧ್ಯೆ ಜನರು ನೆಮ್ಮದಿ ಕಳ್ಕೊಂಡಿದ್ದಾರೆ ಅಲ್ವಾ. ಈ ನೆಮ್ಮದಿ ಪಡೆಯೋಕೆ ಮಾಡೋದಾದ್ರೂ ಏನು? ಇಂತಹ ಪ್ರಶ್ನೆಗೆ ಕೊಡಗಿನ ಜನರು ಉತ್ತರ ಕಂಡುಕೊಳ್ತಾ ಇರೋದು ದೇವರ ಮೂಲಕ.
ಕೊಡಗಿನಲ್ಲಿ ಕೋಲ ಉತ್ಸವ: ಕೊರೊನಾ ತೊಲಗಿಸು ಎಂದು ಬೇಡಿಕೊಂಡ ಭಕ್ತರು! ಹೌದು, ಊರ ಹಬ್ಬದಲ್ಲಿ ಭಗವಂತನನ್ನು ವಿಭಿನ್ನವಾಗಿ ಆರಾಧಿಸುವ ಮೂಲಕ ಜನರು ಕೊರೊನಾ ಕಾಟದಿಂದ ತಮ್ಮನ್ನುಮುಕ್ತಿಗೊಳಿಸುವಂತೆ ಬೇಡಿಕೊಂಡಿದ್ದಾರೆ.
ಗೋವುಗಳಿಗೆ ಪೂಜೆ ಸಲ್ಲಿಸುತ್ತಿರುವ ಗ್ರಾಮಸ್ಥರು, ಉತ್ಸವ ಮೂರ್ತಿಯನ್ನು ಹೊತ್ತು ಹೆಜ್ಜೆ ಹಾಕುತ್ತಿರುವ ಅರ್ಚಕರು, ನೆರೆದವರ ಎದುರು ಕೊಡವ ಜನಪದ ಕೆಲೆಗಳ ಪ್ರದರ್ಶನ... ಈ ಎಲ್ಲಾ ದೃಶ್ಯ ಕಂಡು ಬಂದಿದ್ದು ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಪಾಲೂರು ಗ್ರಾಮದ ಮಹಾಲಿಂಗೇಶ್ವರ ದೇವರ ಉತ್ಸವದಲ್ಲಿ.
ಕಳೆದ ವರ್ಷ ಕೊರೊನಾ ಕಾರಣದಿಂದಾಗಿ ಕೊಡಗು ಜಿಲ್ಲೆಯಲ್ಲಿನ ಬಹುತೇಕ ಹಬ್ಬಹರಿದಿನಗಳು ರದ್ದುಗೊಂಡಿದ್ದವು. ಅದೇ ರೀತಿ ಸುಮಾರು 800 ವರ್ಷಗಳ ಇತಿಹಾಸವಿರುವ ಪಾಲೂರು ಮಹಾಲಿಂಗೇಶ್ವರ ದೇವಾಲಯದಲ್ಲಿಯೂ ಉತ್ಸವವನ್ನ ಆಚರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಈ ಬಾರಿ ನಿಗದಿಯಂತೆ ಒಂದು ವಾರದ ಕಾಲ ಪಾಲೂರಪ್ಪನ ಉತ್ಸವವನ್ನು ಸರಳವಾಗಿ ಆಚರಿಸಲಾಯಿತು.
ವಿಶೇಷ ಎಂದರೆ ಈ ಉತ್ಸವದಲ್ಲಿ ದೇವಾಲಯದ ಒಳಗೆ ಗೋವುಗಳಿಗೆ ಪೂಜೆಯನ್ನು ಸಲ್ಲಿಸಲಾಗುತ್ತದೆ. ಪೂಜೆಗೂ ಮೊದಲು ಹರಕೆ ಹೊತ್ತವರು ತಮ್ಮ ಎತ್ತುಗಳನ್ನು ಅಲಂಕರಿಸಿ ದೇವಾಲಯಕ್ಕೆ ಕರೆತರುತ್ತಾರೆ. ಈ ಬಾರಿ ಕೊರೊನಾ ಹಾವಳಿಯಿಂದ ಸರಳವಾಗಿ ಉತ್ಸವದ ಆಚರಣೆ ನಡೆಯಿತು.
ಕೊಡಗಿನವರ ಕುಲದೇವ ಇಗ್ಗುತ್ತಪ್ಪ ದೇವರ ಸಹೋದರನಾದ ಈ ಪಾಲೂರಪ್ಪ ದೇವರಿಗೆ ಕೊಡಗಿನಲ್ಲಿ ವಿಶೇಷ ಮಹತ್ವವಿದೆ. ಕೊಡಗಿನ ಎಲ್ಲ ದೇವಾಲಯಗಳು ಪೂರ್ವಾಭಿಮುಖವಾಗಿದ್ದರೆ, ಪಾಲೂರು ಮಹಾಲಿಂಗೇಶ್ವರ ದೇವಾಲಯ ಪಶ್ಚಿಮಾಭಿಮುಖವಾಗಿದೆ. ಇನ್ನ ಪ್ರತಿ ವರ್ಷ ಏಪ್ರಿಲ್ ತಿಂಗಳ ಮೂರನೇ ವಾರದಲ್ಲಿ ಪಾಲೂರು ಉತ್ಸವನ್ನ ಆಚರಿಸುವ ಮೂಲಕ ಈ ಭಾಗದ ಜನರು ದೇವರನ್ನು ಸಂತೃಪ್ತಿಗೊಳಿಸುತ್ತಾರೆ.